ಮೈಸೂರು, ಜುಲೈ 31: ದುಬಾರಿ ಬೆಲೆಯ ಕಾರು(Expensive Cars) ಕದ್ದು ಮಾರಾಟ ಮಾಡ್ತಿದ್ದ ಬಾಬು ಎಂಬ ಕಳ್ಳನನ್ನು ಮೈಸೂರಿನ ವಿವಿ ಪುರಂ ಪೊಲೀಸರು(Mysuru VV Puram Police) ಬಂಧಿಸಿದ್ದಾರೆ. ಆರೋಪಿ ಬಾಬು ದುಬಾರಿ ಬೆಲೆಯ ಕಾರುಗಳನ್ನು ಕದ್ದು ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ. ಮಾಜಿ ಸಚಿವ ಶಿವಣ್ಣ ಸೇರಿದಂತೆ ಹಲವರ ಐಶಾರಾಮಿ ಕಾರುಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಸದ್ಯ ಈ ಖತರ್ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಆರೋಪಿ ಬಾಬು ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೈಟೆಕ್ ಕಾರುಗಳ ಕಳ್ಳತನದ ಬಗ್ಗೆ ಟಿವಿ9 ವರದಿ ಮಾಡಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ 3 ಕಾರು, ಚಿನ್ನಾಭರಣ, ದುಬಾರಿ ವಾಚ್‌ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ಆರೋಪಿ ಬಾಬು ಕಾರುಗಳ ಜೊತೆ ಮನೆಗಳ್ಳತನವೂ ಮಾಡುತ್ತಿದ್ದ ಎಂಬ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ. ಮತ್ತಷ್ಟು ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಹೊಸಕೋಟೆ ಕಳ್ಳರ ಜೋಡಿ ಟೊಮೆಟೊ ಹಣ್ಣುಗಳ ಜೊತೆ ಅವುಗಳನ್ನು ಸಾಗಿಸಲು ಟ್ರ್ಯಾಕ್ಟರ್ಗಳನ್ನೂ ಕದ್ದರು!
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಲಿಂಗಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ನಿವಾಸಿ ಅಜೀಜ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 5 ಕೆಜಿ ಗಾಂಜಾ ಜಪ್ತಿ ಮಾಡಲಾಗಿದ್ದು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಭಾರತಿಪುರ ಗ್ರಾಮದ ಹೊಲದಲ್ಲಿ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ರೈತ ಮೃತಪಟ್ಟ ಘಟನೆ ನಡೆದಿದೆ. ಹೊಲದಲ್ಲಿ ಅರಿಶಿನ ಬೆಳೆಗೆ ಔಷಧಿ ಸಿಂಪಡಿಸುತ್ತಿದ್ದಾಗ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ಕಂಬದ ತಂತಿ ತಗುಲಿ ರೈತ ನಾಗರಾಜು(37) ಸಾವನ್ನಪ್ಪಿದ್ದಾರೆ.
ವಿದ್ಯುತ್ ತಂತಿ ಕೆಳಗೆ ಹಾದು ಹೋಗಿದ್ದರ ಬಗ್ಗೆ ಈ ಹಿಂದೆಯೇ ರೈತರು ದೂರು ನೀಡಿದ್ದರು. ವಿದ್ಯುತ್ ತಂತಿ ತೆರವು ಬಗ್ಗೆ ಹಲವು ಬಾರಿ ದೂರು ನೀಡಿದ್ದರು. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ