ಮೈಸೂರು, ನ.09: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ (siddaramaiah) ನಿವಾಸದ ಬಳಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ವೇಳೆ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರು ಹಸಿರು ಶಾಲು ಹಿಡಿದು ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shanthakumar) ಸೇರಿ 50ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆಯಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ದಮನ ಎಂದು ರೈತರು ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹಿನ್ನೆಲೆ ರೈತ ಮುಖಂಡ ಕುರುಬೂರು ಶಾಂತಕುಮಾರ್, ಮಹಿಳೆಯರು ಸೇರಿ ರೈತರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕ್ರಮಕ್ಕೆ ಕುರುಬೂರು ಶಾಂತಕುಮಾರ್ ಹಾಗೂ ರೈತರು ರಸ್ತೆಯಲ್ಲಿ ಮಲಗಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಬಲವಂತವಾಗಿ ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿಗೆ ಹೈಕಮಾಂಡ್ ಸೂಚನೆ ಕೊಟ್ಟಿದ್ಯಾ? ಈ ಬಗ್ಗೆ ಸದಾನಂದಗೌಡ, ಬಿಎಸ್ವೈ ಹೇಳಿದ್ದಿಷ್ಟು
ಸಿದ್ದರಾಮಯ್ಯ ನಿವಾಸದ ಬಳಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲೂ ಮುನ್ನೆಚ್ಚರಿಕೆಯಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ನಿಯೋಜಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಮನೆಗೆ ರೈತರ ಮುತ್ತಿಗೆ ಯತ್ನ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೂ ಪ್ರತಿಭಟನೆಯ ಬಿಸಿ ತಟ್ಟಿದೆ. ಸಿದ್ದರಾಮಯ್ಯ ನಿವಾಸದ ಮಾರ್ಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಜನರು ಹೊರಟಿದ್ದರು. ಇದೇ ವೇಳೆ ಸಿಎಂ ಮನೆ ಮುತ್ತಿಗೆಗೆ ರೈತರು ಕೂಡ ಆಗಮಿಸಿದರು. ಆಗ ರೈತರನ್ನು ತಡೆಯಲು ಪೊಲೀಸರು ಕೂಡ ಧಾವಿಸಿ ಬಂದಿದ್ದಾರೆ. ಈ ವೇಳೆ ತೆರೆದ ವಾಹನದಲ್ಲಿ ಶವಸಂಸ್ಕಾರಕ್ಕೆ ಹೊರಟಿದ್ದ 50ಕ್ಕೂ ಹೆಚ್ಚು ಜನರಿಗೆ ಸಮಸ್ಯೆಯಾಯಿತು. ಪೊಲೀಸರು ಶವಸಂಸ್ಕಾರಕ್ಕೆ ಹೊರಟಿದ್ದವರನ್ನೂ ತಡೆದು ನಿಲ್ಲಿಸಿದ್ರು. ಬಳಿಕ ವಿಚಾರಿಸಿ ವಾಪಸ್ಸು ಕಳುಹಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:14 pm, Thu, 9 November 23