JDS ಮುಖಂಡನ ತೋಟಕ್ಕೆ ಬೆಂಕಿ: ತೆಂಗಿನ ಮರ, ತೇಗ 50 ಅಡಿಕೆ ಮರಗಳು ಬೆಂಕಿಗಾಹುತಿ, ರಾಜಕೀಯ ದ್ವೇಷ ಶಂಕೆ
ಹುಣಸೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಪ್ರಭಾಕರ್ ಅವರ ತೋಟದಲ್ಲಿ ಅಗ್ನಿ ಅವಘಡ ಸಂಭವಿಸಿ ಬೆಲೆ ಬಾಳುವ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಚೌಡಿಕಟ್ಟೆ ರಸ್ತೆಯ ತೋಟದಲ್ಲಿ ನಡೆದಿದೆ.
ಮೈಸೂರು: ಹುಣಸೂರು (Hunsur) ತಾಲೂಕು ಪಂಚಾಯಿತಿ (Taluk Panchayat) ಮಾಜಿ ಸದಸ್ಯ, ಜೆಡಿಎಸ್ (JDS) ಮುಖಂಡ ಪ್ರಭಾಕರ್ ಅವರ ತೋಟದಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ ಬೆಲೆ ಬಾಳುವ ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಪುರಿ ಚೌಡಿಕಟ್ಟೆ ರಸ್ತೆಯ ತೋಟದಲ್ಲಿ ನಡೆದಿದೆ. ರಾಜಕೀಯ ದ್ವೇಷದಿಂದ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. 6 ಎಕರೆಯಲ್ಲಿ ಎಲ್ಲಾ ಬಗೆಯ ಮರಗಳನ್ನು ಬೆಳೆಸಲಾಗಿತ್ತು. ಜೊತೆಗೆ ಇತರೆ ಬೆಳೆಗಳನ್ನು ಬೆಳೆಯಲಾಗಿತ್ತು. 6 ತೆಂಗಿನ ಮರ, 25 ತೇಗ, 50 ಅಡಿಕೆ ಸಸಿಗಳು ಸುಟ್ಟು ಭಸ್ಮವಾಗಿದ್ದು, ಸುಮಾರು ನಾಲ್ಕು ಲಕ್ಷರೂ. ನಷ್ಟವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾರ್ಟ್ ಸರ್ಕ್ಯೂರ್ಟ್ನಿಂದ ಹೊತ್ತಿ ಉರಿದ ಟೆಂಟ್ ಹೌಸ್
ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದ ಶಾಮಿಯಾನ ಗೋಡೌನ್ ಹೊತ್ತಿ ಉರಿದಿರುವ ಘಟನೆ ನಗರದ ಮೈಲಾಪುರ ಅಗಸಿ ಬಳಿ ನಿನ್ನೆ (ಮಾ.16) ರಾತ್ರಿ ನಡೆದಿದೆ. ಮಹಾದೇವಪ್ಪ ಎಂಬುವವರಿಗೆ ಸೇರಿದ ಶಾಮಿಯಾನ ಗೋಡೌನ್ ಇದಾಗಿದ್ದು, ಸುಮಾರು 17 ಲಕ್ಷ ರೂ. ಮೌಲ್ಯದ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಕುರ್ಚಿಗಳು, ಪೆಂಡಾಲ್, ಏರ್ ಕೂಲರ್ಸ್, ಮ್ಯಾಟ್, ಸೋಫಾ ಹಾಗೂ ಪೈಬರ್ ಪ್ಲೇಟ್ಸ್ ಸೇರಿದಂತೆ ಹಲವು ಉಪಕರಣಗಳು ಸುಟ್ಟು ಭಸ್ಮವಾಗಿವೆ.
ಮಹಾದೇವಪ್ಪ ಕೆಲವು ದಿನಗಳ ಹಿಂದೆ ಹೊಸ ಉಪಕರಣಗಳನ್ನು ಖರೀದಿ ಮಾಡಿದ್ದರು. ಮದುವೆ ಸೀಜನ್ ಇರುವುದರಿಂದ ಇವುಗಳನ್ನೇ ನಂಬಿಕೊಂಡಿದ್ದರು. ಈಗ ಶಾಮಿಯಾನ ಉಪಕರಣಗಳು ಬೆಂಕಿಗಾಹುತಿಯಿಂದ ಮಹಾದೇವಪ್ಪ ಕಂಗಾಲಾಗಿದ್ದಾರೆ. ಯಾದಗಿರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು: 20 ಎಕರೆ ಭಸ್ಮ, ಜಿಂಕೆಗಳು ಬೆಂಕಿಗೆ ಆಹುತಿ
ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿ ಗಿಡ, ಮರಗಳು ಆಹುತಿಯಾಗಿದ್ದವು. ಬುಧವಾರ (ಮಾ.14) ಸಂಜೆ 6ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯರು ಆರಂಭದಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: Forest Fire: ಕಾಡ್ಗಿಚ್ಚಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ 250 ಹೆಕ್ಟರ್ನಷ್ಟು ಅರಣ್ಯ ಸಂಪತ್ತು ಹಾನಿ
ಅಗ್ನಿಯ ಕೆನ್ನಾಲಿಗೆ ಹರಡುತ್ತಿದ್ದಂತೆ ಸುತ್ತಲು ದಟ್ಟವಾಗಿ ಹೊಗೆ ಆವರಿಸಿತ್ತು. ಅರಣ್ಯ ಇಲಾಖೆ ಕಚೇರಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು. ಕಗ್ಗಲಿಪುರ ಅರಣ್ಯ ವಲಯ, ಕೃಷ್ಣರಾಜಪುರ ಸೇರಿ ಸುತ್ತಮುತ್ತಲ ವಲಯಗಳ ಅಧಿಕಾರಿಗಳು, ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು.
ಮಾರ್ಚ್ 15 ಸಂಜೆ 6ರಿಂದ ರಾತ್ರಿ 9ರವರೆಗೆ ತುರಹಳ್ಳಿಯ ಅರಣ್ಯ ಪ್ರದೇಶ ಹೊತ್ತಿ ಉರಿದಿದ್ದು, ಸುಮಾರು 25 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು. ಗಿಡ, ಮರಗಳು ಬೆಂಕಿಗಾಹುತಿಯಾಗಿದ್ದವು. ಇನ್ನು ಬೆಂಕಿಗೆ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಆಹುತಿಯಾಗಿವೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ಕಾಡ್ಗಿಚ್ಚಿಗೆ ಧಗ-ಧಗ ಹೊತ್ತಿ ಉರಿದ ಅರಣ್ಯ ಇಲಾಖೆ ಸಿಬ್ಬಂದಿಯ ಮೂರು ಬೈಕ್ಗಳು!
ಕಾಡ್ಗಿಚ್ಚಿಗೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಾಡ್ಗಿಚ್ಚು ಹೊತ್ತಿಸಿರುವ ಶಂಕೆ ವ್ಯಕ್ತವಾಗಿತ್ತು. ಕಳೆದ ವರ್ಷವೂ ಸಹ ಇದೇ ರೀತಿ ತುರಹಳ್ಳಿ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ವರ್ಷ ಫೆಬ್ರವರಿ 15 ರಿಂದ ಮಾರ್ಚ್ 5ರ ನಡುವೆ ಕರ್ನಾಟಕದಲ್ಲಿ ಸುಮಾರು 2,000ಕ್ಕೂ ಹೆಚ್ಚು ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 17 March 23