ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ಮುಗಿಲು ಮುಟ್ಟಿದೆ. ಕರ್ನಾಟಕ ಏಕೀಕರಣಕ್ಕೆ 50 ವರ್ಷ ಸಂದಿರುವ ಹಿನ್ನೆಲೆ ಈ ಬಾರಿ ರಾಜ್ಯೋತ್ಸವದ ಸಂಭ್ರಮ ಇಮ್ಮಡಿಯಾಗಿದೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಮೈಸೂರಿನಲ್ಲಿರುವ ಕನ್ನಡಾಂಬೆ ತಾಯಿ ಭುವನೇಶ್ವರಿಯ ವಿಶೇಷ ದೇಗುಲ.
ಕನ್ನಡಾಂಬೆ ದೇಗುಲ
ನವೆಂಬರ್ ಬಂತೆಂದರೆ ಸಾಕು ಕನ್ನಡಾಂಬೆ ತಾಯಿ ಭುವನೇಶ್ವರಿಗೆ ನಾಡಿನೆಲ್ಲೆಡೆ ಪೂಜೆ ಪುರಸ್ಕಾರ ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಗುತ್ತದೆ. ಆದರೆ ಮೈಸೂರಿನಲ್ಲಿ ಭುವನೇಶ್ವರಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಹೌದು ಮೈಸೂರು ಅರಮನೆಯ ಆವರಣದಲ್ಲಿರುವ ಕನ್ನಡಾಂಬೆ ತಾಯಿ ಭುವನೇಶ್ವರಿ ದೇಗುಲದಲ್ಲಿ ನಿತ್ಯ ವಿವಿಧ ಅಭಿಷೇಕ, ಸಂಕಲ್ಪ ಪೂಜೆ ಹಾಗೂ ಅರ್ಚನೆ ಸೇರಿ ಹಲವು ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ದೇವಸ್ಥಾನವನ್ನು 1951ರಲ್ಲಿ ಮೈಸೂರು ಅರಸರಾದ ಜಯ ಚಾಮರಾಜೇಂದ್ರ ಒಡೆಯರ್ ಅವರು ನಿರ್ಮಾಣ ಮಾಡಿದ್ದರು. ಈ ದೇವಸ್ಥಾನ ಚೋಳ ಶೈಲಿಯ ಗೋಪುರವನ್ನು ಹೊಂದಿದೆ. ಇಲ್ಲಿನ ಪ್ರಧಾನ ದೇವರು ಕನ್ನಡಾಂಬೆ ತಾಯಿ ಭುವನೇಶ್ವರಿ. ಖ್ಯಾತ ಶಿಲ್ಪಿ ಸಿದ್ದಲಿಂಗಸ್ವಾಮಿ ಈ ವಿಗ್ರಹವನ್ನು ಆಕರ್ಷಕವಾಗಿ ಕೆತ್ತಿದ್ದಾರೆ. ದೇಗುಲದಲ್ಲಿ ಸೂರ್ಯ, ಮಹಾವಿಷ್ಣು, ಮಹೇಶ್ವರ, ರಾಜರಾಜೇಶ್ವರಿ, ತಾಯಿ ಚಾಮುಂಡೇಶ್ವರಿ ಗಣಪತಿ ವಿಗ್ರಹಗಳಿವೆ. ಆದರೆ ಇಲ್ಲಿ ಅಗ್ರಪೂಜೆ ಕನ್ನಡಾಂಬೆಗೆ ಸಲ್ಲುತ್ತದೆ.
ವಿಶೇಷ ಆಕರ್ಷಕ ವಿಗ್ರಹ
ಭುವನೇಶ್ವರಿ ಕನ್ನಡಾಂಬೆ ಮಕ್ಕಳಿಗೆ ಸಾರ್ವತ್ರಿಕ ತಾಯಿಯಾಗಿ ಮತ್ತು ಇಡೀ ಬ್ರಹ್ಮಾಂಡದ ಸಂರಕ್ಷಕಿಯಾಗಿದ್ದಾಳೆ. ಆಕೆಯ ವಾಸಸ್ಥಾನ ಮಣಿದ್ವೀಪವಾಗಿದ್ದು ಅದು ಕೋಟೆಯಂತಿದೆ. ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಅದರಲ್ಲಿ ಎರಡು ಕೈಗಳು ಅಂಕುಶ ಮತ್ತು ಕುಣಿಕೆಯನ್ನು ಹಿಡಿದಿವೆ, ಇದು ಭಕ್ತರನ್ನು ತನ್ನ ಹತ್ತಿರಕ್ಕೆ ತರಲು ಮತ್ತು ತನ್ನ ಭಕ್ತರ ಕಷ್ಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಮತ್ತು ಇತರ ಎರಡು ಕೈಗಳನ್ನು ದೇವಿಯು ತನ್ನ ಭಕ್ತರ ನೋವನ್ನು ಕಡಿಮೆ ಮಾಡಲು ಬಳಸುತ್ತಾಳೆ.
Also Read: ಹಚ್ಚೇವು ಕನ್ನಡದ ದೀಪ! ಕನ್ನಡ ಪದಗಳ ಉಚಿತ ಟ್ಯಾಟು ಹಾಕಲಾಗುತ್ತದೆ… ಕನ್ನಡದ ಮಕ್ಕಳೆಲ್ಲಾ ಸಾಲಾಗಿ ಬನ್ನೀ!
ದೇವಿಯ ಒಂದು ಕಣ್ಣು ಪಾಂಡಿತ್ಯ ಮತ್ತು ಸಮೃದ್ಧಿಯನ್ನು ದಯಪಾಲಿಸಿದ ರಾಜ ಮಾತಂಗಿಯಾಗಿದ್ದರೆ. ಇನ್ನೊಂದು ಕಣ್ಣು ಭಕ್ತರನ್ನು ಎಲ್ಲಾ ರೀತಿಯ ದುಷ್ಟರಿಂದ ರಕ್ಷಿಸುವ ಸ್ವರ್ಗೀಯ ಸೈನ್ಯದ ಪ್ರಧಾನ ಸೇನಾಧಿಪತಿ ವರಾಹಿ ಎಂದು ನಂಬಲಾಗಿದೆ. ದೇವಸ್ಥಾನ ಅಪರೂಪದ ವಾಸ್ತುಶಿಲ್ಪ, ವೈಭವವನ್ನು ಹೊಂದಿದೆ. ಇನ್ನು ದೇವಸ್ಥಾನದ ಒಳ ಆವರಣದಲ್ಲಿ ಪವಿತ್ರವಾದ ಮರ ಗಿಡಗಳಿವೆ. ಯದುವಂಶದ ರಾಜರು ವಿಜಯದಶಮಿಯ ದಿನ ಪೂಜಿಸುವ ಶಮಿ ಅಂದರೆ ಬನ್ನಿ ಮರ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮರ, ಸೇವಂತಿಗೆ ಮರ, ತೆಂಗು ಬಾಳೆ ದಾಸವಾಳದ ಹೂವಿನ ಗಿಡಿ ಸೇರಿ ಹಲವು ಸಸ್ಯರಾಶಿಯೇ ಇಲ್ಲಿದೆ. ಆಕರ್ಷಕ ಬಾವಿ ಕೂಡ ದೇಗುಲದ ಒಳ ಆವರಣದಲ್ಲಿದೆ.
ದೇಗುಲದಲ್ಲಿ ಕನ್ನಡ ರಾಜ್ಯೋತ್ಸವ
ಪ್ರತಿ ವರ್ಷ ಮೈಸೂರು ಜಿಲ್ಲಾಡಳಿತದಿಂದ ಅರಮನೆಯ ಭುವನೇಶ್ವರಿ ದೇವಿಗೆ ಮೊದಲು ಪೂಜೆ ಸಲ್ಲಿಸಿ ನಂತರ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ. ಈ ಬಾರಿಯು ಅದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ದೇಗುಲು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಕನ್ನಡಾಂಬೆ ತಾಯಿ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಡಾ ಎಚ್ ಸಿ ಮಹದೇವಪ್ಪಗೆ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಸೇರಿ ಶಾಸಕರು ಹಲವು ಅಧಿಕಾರಿಗಳು ಸಾಥ್ ನೀಡಲಿದ್ದಾರೆ.
ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರು ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ, ವಿಭಿನ್ನವಾಗಿ ಆಚರಿಸಲು ಮದುವಣಗಿತ್ತಿಯಂತೆ ಸಿದ್ಧವಾಗಿದೆ ಕರ್ನಾಟಕ ಏಕೀಕರಣ 50 ವರ್ಷಗಳನ್ನು ಪೂರೈಸಿದ ನೆನಪನ್ನ ಸುಮಧುರವಾಗಿಸಲು ಎಲ್ಲಾ ಸಿದ್ಧತೆಗಳು ಜೋರಾಗಿ ನಡೆದಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Tue, 31 October 23