ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ!

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ 7 ಕೆಜಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಡಿಸೆಂಬರ್‌ನಲ್ಲಿ 'ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್'‌ನಲ್ಲಿ ಕೇವಲ 5 ನಿಮಿಷಗಳಲ್ಲಿ ದರೋಡೆ ಮಾಡಲಾಗಿತ್ತು. ಸದ್ಯ, ಬಂಧಿತರಿಂದ ಕೆಲವು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಿಹಾರ ಮೂಲದ ಮೋಸ್ಟ್ ವಾಂಟೆಡ್ ಆರೋಪಿ ಪೊಲೀಸರ ಬಲೆಗೆ!
ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣ
Edited By:

Updated on: Jan 19, 2026 | 10:27 AM

ಮೈಸೂರು, ಜನವರಿ 19: ಜಿಲ್ಲೆಯ ಹುಣಸೂರಿನಲ್ಲಿ ನಡೆದ ಭಾರೀ ಚಿನ್ನದಂಗಡಿ ದರೋಡೆ  (Gold and Diamond Theft) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಐದು ಜನರಿದ್ದ ಕಳ್ಳರ ಗ್ಯಾಂಗ್, ʻಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ʼ ಚಿನ್ನಂಗಡಿಯಲ್ಲಿ ಸುಮಾರು 7 ಕೆಜಿ ಬಂಗಾರ ಮತ್ತು ಡೈಮಂಡ್​​ ಅನ್ನು ಕೇವಲ 5 ನಿಮಿಷಗಳಲ್ಲಿ ದೋಚಿತ್ತು. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಬಿಹಾರ ಮತ್ತು ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆ

ಆರೋಪಿಗಳನ್ನು ಬಿಹಾರದ ಭಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್ ಹಾಗೂ ದರ್ಭಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಬಿಹಾರ ಮತ್ತು ಕರ್ನಾಟಕ ರಾಜ್ಯಗಳ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಂದು ಚಿನ್ನದ ಸರ, ಒಂದು ಉಂಗುರ, ಒಂದು ಲಕ್ಷ ರೂಪಾಯಿ ನಗದು, ಚಿನ್ನಾಭರಣ ಸಂಗ್ರಹಿಸುವ ಸ್ಟೊರೇಜ್ ಕೇಸ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪಂಕಜ್ ಕುಮಾರ್ ಬಿಹಾರ ಪೊಲೀಸರಿಗೆ 16 ವಿವಿಧ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದು, ಬಿಹಾರ, ಕರ್ನಾಟಕ, ರಾಜಸ್ಥಾನ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ದರೋಡೆ, ಡಕಾಯಿತಿ ಮತ್ತು ಕೊಲೆ ಯತ್ನ ಸೇರಿದಂತೆ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ಹುಣಸೂರು ಚಿನ್ನದಂಗಡಿ ದರೋಡೆ: ರಾಬರಿ ಆಗಿದ್ದು 7 ಕೆ.ಜಿ ಬಂಗಾರ; ಡೈಮಂಡ್​​ ಕೂಡ ಕಳವು

ಐವರಲ್ಲಿ ಇಬ್ಬರು ಅಂದರ್, ಮೂವರಿಗಾಗಿ ಹುಡುಕಾಟ

ಕಳೆದ ಡಿಸೆಂಬರ್ 28ರಂದು ಬಂಧಿತರೂ ಸೇರಿದಂತೆ ಐವರ ತಂಡ ಕೇವಲ ಐದು ನಿಮಿಷಗಳಲ್ಲಿ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಕೆಜಿ ಚಿನ್ನವನ್ನು ದರೋಡೆ ಮಾಡಿ ಪರಾರಿಯಾಗಿತ್ತು. ಈ ಘಟನೆ ಇಡೀ ಮೈಸೂರು ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣದ ಪತ್ತೆಗೆ ಮೈಸೂರು ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಮೂವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.