ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

| Updated By: guruganesh bhat

Updated on: Jun 03, 2021 | 7:51 PM

Shilpa Nag: ಸಾಮಾಜಿಕ ಜಾಲತಾಣದಲ್ಲಿ ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂದು ತಮ್ಮ ವೈಯಕ್ತಿಕ ಭಾವಚಿತ್ರದೊಂದಿಗೆ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ.

ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಶಿಲ್ಪಾ ನಾಗ್ ಪರ ಅಭಿಯಾನ
Follow us on

ಮೈಸೂರು: ಅರಮನೆ ನಗರಿಯ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ರಾಜೀನಾಮೆ ವಿಚಾರವಾಗಿ ಪಾಲಿಕೆ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು, ಶಿಲ್ಪಾ ನಾಗ್​ರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂದು ತಮ್ಮ ವೈಯಕ್ತಿಕ ಭಾವಚಿತ್ರದೊಂದಿಗೆ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ.

ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ವಿಚಾರವಾಗಿ, ಪಾಲಿಕೆ ಪ್ರಭಾರ ಮೇಯರ್ ಅನ್ವರ್ ಬೇಗ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ಆಯುಕ್ತರು ರಾಜೀನಾಮೆ ನೀಡಬಾರದು‌. ಪಾಲಿಕೆಯ 65 ಸದಸ್ಯರು ಶಿಲ್ಪಾ ನಾಗ್​ರ ಜತೆಗೆ ಇದ್ದೇವೆ. ಜಿಲ್ಲಾಧಿಕಾರಿ ಇಷ್ಟು ಕಿರುಕುಳ ನೀಡಿದ್ದಾರೆ ಅಂತಾ ನಮಗೂ ಗೊತ್ತಿರಲಿಲ್ಲ. ಮೈಸೂರು ಪಾಲಿಕೆಗಷ್ಟೇ ಅಲ್ಲ, ದೇಶಕ್ಕೆ ಈ ರೀತಿಯ ಅಧಿಕಾರಿ ಬೇಕು‌ ಎಂದು ತಿಳಿಸಿದರು.

ರಾಜೀನಾಮೆ ಅಂಗೀಕಾರ ಮಾಡಲ್ಲ: ಸಚಿವ ಸೋಮಶೇಖರ್
ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತನಾಡುತ್ತೇನೆ ಎಂದು ಸಹಕಾರ ಸಚಿವ ಸೋಮಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶಿಲ್ಪಾ ನಾಗ್ ಅವರು ಸೇವೆಯಲ್ಲಿ ಮುಂದುವರಿಯುವಂತೆ ಮನವೊಲಿಸಲಾಗುವುದು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಶುಕ್ರವಾರ ನಾನು ಮೈಸೂರು ಪ್ರವಾಸ ಕೈಗೊಂಡಿದ್ದು, ಆ ವೇಳೆ ಖುದ್ದು ಭೇಟಿಯಾಗಿ ಮಾತನಾಡುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸರ್ಕಾರಿ‌ ಕಾರು ಬಿಟ್ಟು ತೆರಳಿರುವ ಶಿಲ್ಪಾನಾಗ್
ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಕೊಡುತ್ತೇನೆ ಎಂದು ಸುದ್ದಿಗೋಷ್ಠಿ ನಡೆಸಿದ ಬಳಿಕ‌ ಸ್ನೇಹಿತರ ಕಾರಿ‌ನಲ್ಲಿ ತೆರಳಿದರು. ಆನಂತರ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ಕಾರಿನ ಚಾಲಕ‌, ನೀವು ಮನೆಗೆ ಹೋಗಿ ಎಂದು ನಮ್ಮ ಬಳಿ ಹೇಳಿ ತೆರಳಿದ್ದಾರೆ. ಅವರು ಕಳೆದ ಮೂರ್ನಾಲ್ಕು ದಿನದಿಂದ ಊಟವನ್ನು ಸರಿಯಾಗಿ ಮಾಡಿಲ್ಲ. ಕಚೇರಿಗೆ ಊಟ ತೆಗೆದುಕೊಂಡು ಹೋದರೂ ಊಟ ಮಾಡುತ್ತಿರಲಿಲ್ಲ. ಬೇಸರದಿಂದ ಇದಂತೆ ಇದ್ದರು.
ಅವರು ತುಂಬ ಶ್ರಮದಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಬೇಸರ ಇತ್ತು ಎಂಬುದನ್ನು ನಮಗೆ ತಿಳಿಸಿರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಐಎಎಸ್​ vs ಐಎಎಸ್​: ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ

‘ಕೇಂದ್ರ ಸರ್ಕಾರವೇ ಕೊವಿಡ್​ 19 ಲಸಿಕೆ ಖರೀದಿಸಿ ಪೂರೈಕೆ ಮಾಡಲಿ..’-ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಒಡಿಶಾ ಸಿಎಂ

(I stand with our Commissioner Campaign on Mysore Corporation Commissioner Shilpa Nag in Social Site by Corporation members)