‘ಕೇಂದ್ರ ಸರ್ಕಾರವೇ ಕೊವಿಡ್​ 19 ಲಸಿಕೆ ಖರೀದಿಸಿ ಪೂರೈಕೆ ಮಾಡಲಿ..’-ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಒಡಿಶಾ ಸಿಎಂ

ನವೀನ್ ಪಟ್ನಾಯಕ್​ ಪತ್ರ ನನಗೆ ಸಿಕ್ಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿದ್ದಾರೆ. ಅವರಷ್ಟೇ ಅಲ್ಲ, ಈ ವಿಚಾರವಾಗಿ ದೆಹಲಿ ಮತ್ತು ಕೇರಳದ ಮುಖ್ಯಮಂತ್ರಿಗಳೂ ನನ್ನನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವೇ ಕೊವಿಡ್​ 19 ಲಸಿಕೆ ಖರೀದಿಸಿ ಪೂರೈಕೆ ಮಾಡಲಿ..’-ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಒಡಿಶಾ ಸಿಎಂ
ಮುಖ್ಯಮಂತ್ರಿ ನವೀನ್​ ಪಟ್ನಾಯಕ್​
Follow us
TV9 Web
| Updated By: Lakshmi Hegde

Updated on: Jun 03, 2021 | 4:15 PM

ಕೇಂದ್ರ ಸರ್ಕಾರ ಎಲ್ಲ ಸಾರ್ವಜನಿಕರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕು ಎಂಬ ಆಗ್ರಹಪೂರ್ವಕ ನಿರ್ಣಯನ್ನು ನಿನ್ನೆ ಕೇರಳ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಅದರ ಬೆನ್ನೆಲ್ಲೇ ಹೆಚ್ಚೆಚ್ಚು ರಾಜ್ಯಗಳಿಂದ ಈ ಬೇಡಿಕೆ ಕೇಳಿಬರುತ್ತಿದೆ. ಲಸಿಕೆಯ ತೀವ್ರ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ನಿನ್ನೆ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದರು. ಅದಾದ ಬಳಿಕ ಸರ್ವಾನುಮತದಿಂದ ಅದನ್ನು ಅಂಗೀಕರಿಸಲಾಗಿದೆ.

ಕೊರೊನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಇರುವ ಸೂಕ್ತ ಕ್ರಮವೆಂದರೆ ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿದೆ. ಆದರೆ ಕೇಂದ್ರ ಅದನ್ನು ಬಿಟ್ಟು, ರಾಜ್ಯಗಳು ಲಸಿಕೆ ಖರೀದಿಸಿ ಜನರಿಗೆ ಕೊಡಬೇಕು ಎಂದು ಹೇಳುತ್ತಿದೆ. ಇದು ನಿಜಕ್ಕೂ ಆಕ್ಷೇಪಣೀಯ ವಿಚಾರ ಎಂದು ವೀಣಾ ಹೇಳಿದ್ದಾರೆ. ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಮಂಗಳವಾರ 11 ಬಿಜೆಪಿಯೇತರ ಅಧಿಕಾರ ಇರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಉಚಿತವಾಗಿ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಎಂದು ಹೇಳಿದ್ದಾರೆ.

ಹಾಗೇ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಇದೇ ವಿಚಾರವನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರ ಲಸೀಕೆ ಖರೀದಿಯನ್ನು ಕೇಂದ್ರೀಕೃತಗೊಳಿಸಬೇಕು. ಹಲವು ರಾಜ್ಯಸರ್ಕಾರಗಳು ಜಾಗತಿಕ ಟೆಂಡರ್ ಕರೆದಿದ್ದಾರೆ. ಆದರೆ ಜಾಗತಿಕ ಕಂಪನಿಗಳು ಕೇಂದ್ರ ಸರ್ಕಾರದ ಅನುಮತಿ ಮತ್ತು ಭರವಸೆಗಾಗಿ ಕಾಯುತ್ತವೆ. ರಾಜ್ಯಸರ್ಕಾರಗಳೊಂದಿಗೆ ಲಸಿಕೆ ಒಪ್ಪಂದಕ್ಕೆ ಬರುತ್ತಿಲ್ಲ. ಹೀಗಾಗಿ ಲಸಿಕೆ ಖರೀದಿ ವಿಚಾರದಲ್ಲಿ ಕೇಂದ್ರವೇ ಮುಂದಾಗಬೇಕು. ಈ ಬಗ್ಗೆ ಎಲ್ಲ ರಾಜ್ಯಸರ್ಕಾರಗಳೂ ಸೇರಿ ಕೇಂದ್ರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನವೀನ್ ಪಟ್ನಾಯಕ್​ ಪತ್ರ ನನಗೆ ಸಿಕ್ಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿದ್ದಾರೆ. ಅವರಷ್ಟೇ ಅಲ್ಲ, ಈ ವಿಚಾರವಾಗಿ ದೆಹಲಿ ಮತ್ತು ಕೇರಳದ ಮುಖ್ಯಮಂತ್ರಿಗಳೂ ನನ್ನನ್ನು ಸಂಪರ್ಕಿಸಿದ್ದಾರೆ. ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ, ಪೂರೈಸಬೇಕು ಎಂಬುದೇ ನಮ್ಮೆಲ್ಲರ ಆಗ್ರಹ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಾಗೇ, ಬಿಜೆಪಿ ಸರ್ಕಾರದ ವಿರುದ್ಧ ತೀರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಿ; ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ