ವಿಜಯೇಂದ್ರನನ್ನ ಮಿನಿಸ್ಟರ್ ಮಾಡಿದರೆ ಗುಣಾತ್ಮಕ ಬದಲಾವಣೆ ಆಗುತ್ತಾ: ಪತ್ರಕರ್ತರ ಪ್ರಶ್ನೆಗೆ ಹೆಚ್.ವಿಶ್ವನಾಥ್ ವ್ಯಂಗ್ಯ
ಪಠ್ಯಪುಸ್ತಕ ಪರಿಷ್ಕರಣೆಗೆ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯಪುಸ್ತಕ ಯಾವುದೇ ಕಾರಣಕ್ಕೂ ಬೇಡ.
ಮೈಸೂರು: ರಾಜ್ಯದಲ್ಲಿ ಸಚಿವ ಸಂಪುಟ ಚರ್ಚೆ ನಡೆಯುತ್ತಿದ್ದು, ವಿಜಯೇಂದ್ರಗೆ ಸಚಿವ ಸ್ಥಾನ ನೀಡುವುದಕ್ಕೆ ಹೆಚ್.ವಿಶ್ವನಾಥ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಮಿನಿಸ್ಟರ್ ಆಗ್ತಾರ ಎನ್ನುವ ಪತ್ರಕರ್ತರ ಪ್ರಶ್ನೆಗೆ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಆಗುವುದಾದರೆ ಆಗಲಿ ಬಿಡಿ. ಗುಣಾತ್ಮಕ ವಿಚಾರಕ್ಕೆ ಬದಲಾವಣೆಗಳು ಆಗಬೇಕು. ವಿಜಯೇಂದ್ರ ಮಿನಿಸ್ಟರ್ ಮಾಡಿದರೆ ಗುಣಾತ್ಮಕ ಬದಲಾವಣೆ ಆಗುತ್ತಾ ಎಂದು ಮೈಸೂರಿನಲ್ಲಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನೆ ಕೇಳಿದರು. ವಿಶ್ವನಾಥ್ಗೆ ಸಚಿವ ಸ್ಥಾನ ನೀಡುವಂತೆ ಹೋರಾಟ ವಿಚಾರವಾಗಿ ಕೆಲವರು ಹೋರಾಟ ಮಾಡುತ್ತಾ ಇದ್ದಾರೆ. ಆದರೆ ಇವರು ಕೊಡಬೇಕಲ್ಲ ಎಂದು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆಗೆ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ
ಪಠ್ಯಪುಸ್ತಕ ಪರಿಷ್ಕರಣೆಗೆ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯಪುಸ್ತಕ ಯಾವುದೇ ಕಾರಣಕ್ಕೂ ಬೇಡ. ಯಜ್ಞ ಕುಂಡ ಯಾವ ಕಡೆ ಇರಬೇಕೆಂದು ಪಠ್ಯದಲ್ಲಿ ಸೇರ್ಪಡೆ ಮಾಡಿದ್ದು, ಇಂತಹ ಪಠ್ಯಬೋಧನೆ ಮಾಡುವುದು ಯಾರಿಗೆ ಬೇಕು? ಶಿಕ್ಷಣ ತಜ್ಞರಲ್ಲದವರು ಅಧ್ಯಕ್ಷರಾಗಿರುವುದು ದುರಂತ. ರೋಹಿತ್ ಚಕ್ರತೀರ್ಥ ಸಂಘ ಪರಿವಾರದ ಕಾರ್ಯಕರ್ತ. ಹೆಡ್ಗೆವಾರ್ಗೂ ಟಿಪ್ಪುಗೆ ಹೋಲಿಕೆ ಮಾಡುತ್ತಿರುವುದು ಸರಿಯಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರಚರಿತ್ರೆ ಗೊತ್ತಿಲ್ವಾ? ಟಿಪ್ಪು ಮಂಡಿಯೂರದೆ ತನ್ನ ಮಕ್ಕಳನ್ನು ಗಿರವಿ ಇಟ್ಟವನು ಎಂದು ಹೇಳಿದರು.
ಮಳೆ ಅವಾಂತರ ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಮಾತನಾಡಿದ್ದು, ರಾಜಕಾಲುವೆ ಒತ್ತುವರಿಯಿಂದಲೇ ಸಮಸ್ಯೆಯಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವು ಆರಂಭಿಸಿದ್ದರು. ಆ ಜಾಗದಲ್ಲಿ ಪ್ರಸಿದ್ಧ ನಟ, ಶ್ರೀಮಂತ ರಾಜಕಾರಣಿ ಮನೆ ಇದ್ದವು ಎಂದು ಕಾರ್ಯಾಚರಣೆ ನಿಲ್ಲಿಸಿದರು. ಬಡವರು ಮಾತ್ರ ಮನೆ ಕಳೆದು ಕೊಂಡು ಬೀದಿಗೆ ಬಿದ್ದರು. ಶ್ರೀಮಂತರ ಮನೆಗಳು ಹಾಗೇ ಉಳಿದವು. ಶ್ರೀಮಂತರಿಗಾಗಿ ಬಡವರನ್ನು ಬೀದಿಗೆ ತಂದಿದ್ದಾರೆ. ಬೆಂಗಳೂರಿನ ಕೆ.ಆರ್. ಪುರಂಗೆ ಸಿಎಂ ಹೋದರೆ ಅಲ್ಲಿ ಹೂ ಎರಚುತ್ತಾರೆ. ಅಲ್ಲಿನ ಜನರ ಮನೆಗೆ ನೀರು ಹೋಗಿದೆ ಇವರು ಹೂ ಎರಚಿ ಸಂಭ್ರಮಿಸುತ್ತಾರೆ ಇದು ಸರಿನಾ? ಮೂಲಭೂತ ಸೌಕರ್ಯಕ್ಕೆ ಎಲ್ಲೆಡೆ ಅತಿ ಹೆಚ್ಚು ಹಣ ಖರ್ಚಾಗುತ್ತಿದೆ. ಪ್ರತಿ ಫಲ ಮಾತ್ರ ಇಲ್ಲ ಎಂದು ಹೇಳಿದರು.
ಮೈಸೂರು ಜಿಲ್ಲಾ ಮಂತ್ರಿ ಎಲ್ಲಿ ಹೋದ್ರು ? ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ ನೀವು ಖುದ್ದು ಬಂದು ನೋಡಬೇಕು ತಾನೇ? ಸಿಎಂ ಎಲ್ಲಾ ಕಡೆ ಹೋಗಿ ಜನರ ಸಂಕಷ್ಟ ಅಲಿಸುತ್ತಿದ್ದಾರೆ. ಜಿಲ್ಲಾ ಮಂತ್ರಿಗಳು ಯಾಕೆ ಎಲ್ಲೂ ಹೋಗುತ್ತಿಲ್ಲ? ನಿಮಗೆ ಏನಾಗಿದೆ? ಎಂದು ಪ್ರಶ್ನಿಸಿದರು. ಜನಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಿ. ಹಿಂದೆ ಮೋದಿ ಮೈಸೂರಿಗೆ ಬಂದಾಗ ಮೈಸೂರು ಪ್ಯಾರಿಸ್ ಮಾಡ್ತಿನಿ ಅಂತ ಹೇಳಿದ್ದರು. ಈಗ ಮೈಸೂರು ಕೊಳಚೆಯಾಗುತ್ತಿದೆ. ಇದನ್ನು ಮೋದಿ ಬಂದಾಗ ಪ್ರಶ್ನೆ ಮಾಡಬೇಕು ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.