ಹೈಕೋರ್ಟ್ ಸುದ್ದಿಗಳು: ರಸ್ತೆಗಳಲ್ಲಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ನಿರ್ಬಂಧ
ಇಂದು ಕರ್ನಾಟಕ ಹೈಕೋರ್ಟ್ ಕೆಲವು ಮಹತ್ವದ ಅರ್ಜಿಗಳ ವಿಚಾರಣೆ ನಡೆಸಿತು. ಹಾಗಾದರು ಯಾವ ಅರ್ಜಿಗಳವು? ಕೋರ್ಟ್ ಆದೇಶಗಳೇನು ?ಎಂಬ ವಿವರ ಇಲ್ಲಿದೆ.
ಬೆಂಗಳೂರು: ರಸ್ತೆಗಳಲ್ಲಿ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಆಧರಿಸಿ ಹೈಕೋರ್ಟ್ ನಿರ್ದೇಶನ ನೀಡಿದೆ. ಮೈಸೂರಿನ ಗನ್ ಹೌಸ್ ಸರ್ಕಲ್‌ನಲ್ಲಿ ಪ್ರತಿಮೆ ಸ್ಥಾಪಿಸುವ ಮೈಸೂರು ಪಾಲಿಕೆಯ ನಿರ್ಣಯವನ್ನು ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಮೈಸೂರಿನ ಗನ್ ಹೌಸ್ ಸರ್ಕಲ್‌ನಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮತ್ತು ಮೈಸೂರು ಪಾಲಿಕೆ ಅನುಮೋದನೆ ನೀಡಿದ್ದವು. ಪ್ರತಿಮೆ ಸ್ಥಾಪನೆಯನ್ನು ಪ್ರಶ್ನಿಸಿ ಕ್ಷತ್ರಿಯ ಮಹಾಸಭಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಗನ್ ಹೌಸ್ ಸರ್ಕಲ್ ರಸ್ತೆ ಮಧ್ಯದಲ್ಲಿದೆ. ಸುಪ್ರೀಂ ಕೋರ್ಟ್ ಪ್ರತಿಮೆಗಳ ಸ್ಥಾಪನೆಗೆ ನಿರ್ಬಂಧ ಹೇರಿದೆ. ಜತೆಗೆ ಈಕುರಿತು ಯಾವುದೇ ಅನುಮತಿ ನೀಡದಂತೆ ಸರ್ಕಾರಗಳಿಗೆ ಸೂಚಿಸಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಬಿಬಿಎಂಪಿ ಮಳಿಗೆ ಹಂಚಿಕೆ- ಹೈಕೋರ್ಟ್ ಅಸಮಾಧಾನ ಟೆಂಡರ್ ಕರೆಯದೆ ಬಿಬಿಎಂಪಿ ಮಳಿಗೆ ಹಂಚಿದ ಆರೋಪದಡಿ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಏಕೆ ದಾಖಲಿಸಬಾರದು ಎಂದು ಪ್ರಶ್ನಿಸಿದ ಹೈಕೋರ್ಟ್, ಕಾರಣ ಕೇಳಿ ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನ ಮಳಿಗೆಯೊಂದನ್ನು ಟೆಂಡರ್ ಮೂಲಕವೇ ಹಂಚಲಾಗುವುದು ಎಂದು ಈ ಹಿಂದೆ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ತದನಂತರ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದಂತೆ ಬಿಬಿಎಂಪಿ ನಡೆದುಕೊಂಡಿರಲಿಲ್ಲ. ಟೆಂಡರ್ ಕರೆಯದೇ ಮಳಿಗೆಗಳ ಹಂಚಿಕೆ ಮಾಡಿತ್ತು. ಬಿಬಿಎಂಪಿಯ ಈ ನಡೆಯ ಕುರಿತು ಎಂ.ಶರಣು ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಎಂಪಿಯ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ವಿಳಂಬ ಮಾಡದೇ ತನಿಖೆ ನಡೆಸಿ ಸಬ್ ರಿಜಿಸ್ಟ್ರಾರ್ ಕಚೇರಿಗಳ ಫ್ರಾಂಕಿಂಗ್ ನಕಲು ಆರೋಪದ ಸಿಬಿಐ ತನಿಖೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಪ್ರಕರಣದ ಬಗ್ಗೆ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ತನಿಖೆಯ ಹೊಣೆಯನ್ನ ಹಿರಿಯ ಅಧಿಕಾರಿಗೆ ವಹಿಸಲಾಗಿದೆ. ಹೀಗಾಗಿ ತನಿಖೆಗೆ 3 ತಿಂಗಳ ಕಾಲಾವಕಾಶ ರಾಜ್ಯ ಸರ್ಕಾರ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ವಿಳಂಬ ಮಾಡದಂತೆ 3 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಸೂಚನೆ ನೀಡಿದೆ.
ಇದನ್ನೂ ಓದಿ:
ನಿಫಾ ಭೀತಿ: ಕೇರಳದಿಂದ ಬರುವವರಿಗೆ ಕಡ್ಡಾಯ ತಪಾಸಣೆ; ಇನ್ನೊಂದೆಡೆ, ಹಣ್ಣುಗಳಿಂದ ವೈರಸ್ ಹಬ್ಬುವ ಭಯ
ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು; ಕಾಡೆಮ್ಮೆ, ಜಿಂಕೆ, ಕರಡಿಗಳನ್ನು ಕಂಡು ಪುಳಕಿತರಾದ ಜನ
(Karnataka High Court rejects decision of establish statues in public roads)