ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು; ಕಾಡೆಮ್ಮೆ, ಜಿಂಕೆ, ಕರಡಿಗಳನ್ನು ಕಂಡು ಪುಳಕಿತರಾದ ಜನ

ವೀರನಹೊಸಹಳ್ಳಿಯಿಂದ ನಾಗರಹೊಳೆ ಮೂಲಕ ಕೊಡಗಿಗೆ ಹೋಗುವ ರಸ್ತೆಯಲ್ಲಿ ಕಾಡೆಮ್ಮೆ, ಜಿಂಕೆ, ಕರಡಿಗಳು ಕಾಣಿಸಿಕೊಂಡಿವೆ. ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಹಿನ್ನೆಲೆ ನಿನ್ನೆ, ಮೊನ್ನೆ ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಿದ್ದು, ಕಾಡು ಪ್ರಾಣಿಗಳು ಸೀದಾ ರಸ್ತೆಗಿಳಿದಿವೆ.

ಮೈಸೂರು: ರಸ್ತೆಗಿಳಿದ ಕಾಡುಪ್ರಾಣಿಗಳು; ಕಾಡೆಮ್ಮೆ, ಜಿಂಕೆ, ಕರಡಿಗಳನ್ನು ಕಂಡು ಪುಳಕಿತರಾದ ಜನ
ಪ್ರಯಾಣಿಕರಿಗೆ ಎದುರಾದ ಕಾಡುಪ್ರಾಣಿಗಳು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳ ಪೈಕಿ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಒಂದು. ಅಲ್ಲಿಗೆ ತೆರಳಿದರೆ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಿ ಆನಂದಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇದೀಗ ಮೃಗಾಲಯದಾಚೆಗೂ ಕೆಲ ಪ್ರಾಣಿಗಳು ಕಾಣಿಸಿಕೊಳ್ಳುತ್ತಾ ಜನರಿಗೆ ಮುದ ನೀಡುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಕಾಡೆಮ್ಮೆ, ಜಿಂಕೆ, ಕರಡಿ ಸೇರಿದಂತೆ ಅಪರೂಪದ ಪ್ರಾಣಿಗಳ ದರ್ಶನವಾಗಿದ್ದು, ಆ ಫೋಟೋ ಮತ್ತು ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ವೀರನಹೊಸಹಳ್ಳಿಯಿಂದ ನಾಗರಹೊಳೆ ಮೂಲಕ ಕೊಡಗಿಗೆ ಹೋಗುವ ರಸ್ತೆಯಲ್ಲಿ ಕಾಡೆಮ್ಮೆ, ಜಿಂಕೆ, ಕರಡಿಗಳು ಕಾಣಿಸಿಕೊಂಡಿವೆ. ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಹಿನ್ನೆಲೆ ನಿನ್ನೆ, ಮೊನ್ನೆ (ಶನಿವಾರ, ಭಾನುವಾರ) ಈ ಮಾರ್ಗದಲ್ಲಿ ವಾಹನ ಸಂಚಾರ ಕಡಿಮೆಯಿದ್ದು, ಕಾಡು ಪ್ರಾಣಿಗಳು ಸೀದಾ ರಸ್ತೆಗಿಳಿದಿವೆ. ಹೀಗಾಗಿ ವಾರಾಂತ್ಯದಲ್ಲಿ ಈ ರಸ್ತೆಯಲ್ಲಿ ಸಂಚರಿಸಿದವರಿಗೆ ವನ್ಯ ಪ್ರಾಣಿಗಳ ದರ್ಶನ ಹತ್ತಿರದಿಂದ ಆಗಿದೆ.

ರಸ್ತೆಯ ಪಕ್ಕದಲ್ಲೇ ಮೇಯುತ್ತಿರುವ ಕಾಡೆಮ್ಮೆಗಳ ಹಿಂಡು, ರಸ್ತೆಯಂಚಲ್ಲೇ ನಿಂತಿರುವ ಜಿಂಕೆಗಳ ದಂಡು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದರಿ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಜತೆಗೆ, ಕರಡಿಯೊಂದು ಎದುರಾಗಿರುವ ವಿಡಿಯೋ ಕೂಡಾ ಇದ್ದು, ಸುಮಾರು ಎರಡರಿಂದ ಮೂರು ನಿಮಿಷಗಳ ಕಾಲ ವಾಹನ ಸಾಗುವ ರಸ್ತೆಯಲ್ಲೇ ನಡೆದುಕೊಂಡು ಹೋದ ಕರಡಿ, ವಾಹನದ ಶಬ್ದಕ್ಕೂ ಬೆಚ್ಚದೇ ತನ್ನ ಪಾಡಿಗೆ ತಾನು ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಕಾರಿನ ಎದುರು ಭಾಗದಲ್ಲೇ ಕಂಡ ಕರಡಿ ಒಂದೆರೆಡು ಬಾರಿ ಹಿಂದಿರುಗಿ ನೋಡಿದೆಯಾದರೂ ವಾಹನವನ್ನು ಕಂಡು ಭಯಗೊಂಡಿಲ್ಲ. ಅಲ್ಲದೇ, ರಸ್ತೆಯನ್ನು ಬಿಟ್ಟು ಆಚೀಚೆ ಹೋಗದೇ ವಾಹನದ ಮುಂಭಾಗದಲ್ಲೇ ಕೊಂಚ ದೂರ ಸಾಗಿ ಒಂದು ಬಾರಿ ನಿಂತು ಸುತ್ತಲೂ ಕಣ್ಣು ಹಾಯಿಸಿದೆ. ಬಳಿಕ ಮೆಲ್ಲಗೆ ರಸ್ತೆ ಬಿಟ್ಟು ಪಕ್ಕಕ್ಕೆ ಸರಿದಿದೆ. ಈ ದೊಡ್ಡ ಕರಡಿ ಸತ್ತ ಸಾಗಿದ ಬಳಿಕ ಕಾರು ಮುಂದೆ ಚಲಿಸುತ್ತಿದ್ದಂತೆಯೇ ಮತ್ತೆರೆಡು ಕರಡಿಗಳ ದರ್ಶನವಾಗಿದೆ. ಕಾಡಿನಿಂದ ಓಡೋಡಿ ರಸ್ತೆಗೆ ಬಂದ ಎರಡು ಕರಡಿಗಳು ರಸ್ತೆಯಲ್ಲಿ ನಿಲ್ಲದೇ ಆಚೆಗೆ ದಾಟಿ ಕಾಡಿನ ಹಾದಿ ಹಿಡಿದಿವೆ. ಒಟ್ಟಾರೆಯಾಗಿ ವೀಕೆಂಡ್‌ ಸಂದರ್ಭದಲ್ಲಿ ಕಾಡಿನ ರಸ್ತೆಯಲ್ಲಿ ಸಂಚರಿಸಿದವರಿಗೆ ಕಾಡು ಪ್ರಾಣಿಗಳು ವಿಶೇಷ ದರ್ಶನ ನೀಡಿ ಪುಳಕಗೊಳಿಸಿವೆ.

ಇದನ್ನೂ ಓದಿ:
World Elephant Day 2021: ಕಾಡುಗಳಲ್ಲಿ ಅಲೆಯುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕ ಆನೆಗಳು 

ಪ್ರಾಣಿಗಳ ಸಾಕಲು ಬಂದ ದೇಣಿಗೆ ಹಣದಿಂದ ಐಷಾರಾಮಿ ಕಾರು ಖರೀದಿ ಆರೋಪ: ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹೇಳಿದ್ದೇನು?

(Wild animals on road near Mysuru photos videos gone viral)

Click on your DTH Provider to Add TV9 Kannada