
ಮೈಸೂರು, ಮೇ 27: ರಾಜ್ಯ ಪ್ರವೇಶಿಸಿರುವ ಮುಂಗಾರು (Monsoon) ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿದೆ. ಮೈಸೂರು (Mysore) ಮತ್ತು ಕೊಡಗು (Kodagu) ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ನಾಗರಹೊಳೆ (Nagarhole) ಭಾಗದಲ್ಲೂ ಜೋರು ಮಳೆಯಾಗುತ್ತಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆ ಕಾರಣದಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎರಡು ಕಡೆಗಳಲ್ಲಿ ಸಫಾರಿಯನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೊಡಗಿನ ಕುಟ್ಟ ಸಮೀಪದ ನಾಣಚ್ಚಿ ಗೇಟ್ ಹಾಗೂ ಮೈಸೂರು ಜಿಲ್ಲೆಯ ವೀರನಹೊಸಹಳ್ಳಿ ಸಫಾರಿಯನ್ನು ರದ್ದುಪಡಿಸಲಾಗಿದೆ. ಆದರೆ, ಹೆಚ್ಡಿ ಕೋಟೆ ತಾಲೂಕಿನಲ್ಲಿನ ದಮ್ಮನಕಟ್ಟೆ (ಕಬಿನಿ) ಕೇಂದ್ರದಲ್ಲಿ ಸಫಾರಿಗಳು ಎಂದಿನಂತೆ ಮುಂದುವರೆಯಲಿವೆ ಎಂದು ಅರಣ್ಯ ಇಲಾಖೆಯಿಂದ ಮಾಹಿತಿ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರಿ ವೇಗದಲ್ಲಿ ಗಾಳಿ ಬೀಸುವ ಹಾಗೂ ಮಳೆಯಾಗುವ ಸಂಭವ ಇದೆ. ಹೀಗಾಗಿ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಕಡಲತೀರಕ್ಕೆ ಪ್ರವಾಸಿಗರು ಬರುವುದನ್ನು ರದ್ದು ಮಾಡಿದೆ. ಮುರ್ಡೇಶ್ವರ ಮತ್ತು ಕಾರವಾರ ಕಡಲತೀರದಲ್ಲಿ ಕೆಂಪು ಬಾವುಟ ನೆಟ್ಟಿದ್ದು, ಪ್ರವಾಸಿಗರು ಆಗಮಿಸಿದಂತೆ ಸೂಚನೆ ನೀಡಲಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ನದಿ, ತೊರೆ, ಜಲಪಾತಗಳಿಗೆ ಇಳಿಯುವುದು, ಸ್ನಾನ ಮಾಡುವುದನ್ನು ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ಕೆ. ವೆಂಕಟರಾಜ ಅವರು ಆದೇಶ ಹೊರಡಿಸಿದ್ದಾರೆ.
ನದಿಗಳು ತುಂಬಿ ಹರಿಯುತ್ತಿರುವುದರಿಂದ ಜಲಪಾತಗಳು ಕೂಡ ಮೈದುಂಬಿ ಧುಮ್ಮುಕ್ಕುತ್ತಿವೆ.
ಈ ಸಂದರ್ಭದಲ್ಲಿ ಜಲಪಾತದ ತಳ ಭಾಗಕ್ಕೆ ಇಳಿಯುವ ಸಾಹಸ ಮಾಡಿ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಜಲಪಾತಗಳ ತಳ ಭಾಗಕ್ಕೆ ಇಳಿಯದಂತೆ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಭಾರತದಿಂದ ಬಿಎಫ್ಎಸ್; ಇದು ವಿಶ್ವದಲ್ಲೇ ಅತ್ಯಂತ ಕರಾರುವಾಕ್ ಹವಾಮಾನ ಮುನ್ಸೂಚನೆ ವ್ಯವಸ್ಥೆ
ಮುಂದಿನ ಮೂರು ದಿನಕ್ಕೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Tue, 27 May 25