ಮೈಸೂರು, ಜುಲೈ. 07: ರೈತರ ಹೋರಾಟಕ್ಕೆ ಮಣಿದ ಕಾವೇರಿ ನೀರಾವರಿ ನಿಗಮ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಆದೇಶ ಹೊರಡಿಸಿದೆ. ನಾಲೆಗಳಿಗೆ ನೀರು ಹರಿಸುವಂತೆ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಇದೀಗ ಹೋರಾಟಕ್ಕೆ ಮಣಿದು 16 ದಿನ ನಾಲೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಆದೇಶ ಹೊರಡಿಸಿದೆ. ಜು 10ರಿಂದ ಜು 25ರವರೆಗೆ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಕಬಿನಿ ಎಡದಂಡೆ ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತಿದ್ದು ಜಾನುವಾರುಗಳಿಗೆ ಕುಡಿಯಲು ಬಳಸುವಂತೆ ಮನವಿ ಮಾಡಲಾಗಿದೆ. ಮುಂದೆ ಬೆಳೆಗಳಿಗೂ ನೀರು ಒದಗಿಸುವ ಬಗ್ಗೆ ಕಾವೇರಿ ನೀರಾವರಿ ನಿಗಮ ಭರವಸೆ ನೀಡಿದೆ.
ಇನ್ನು ಮತ್ತೊಂದೆಡೆ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದ ಒಳಹರಿವು ನೀರಿನ ಪ್ರಮಾಣದಲ್ಲಿ ಏರಿಕೆ ಹೆಚ್ಚಾಗಿದೆ. ಕಬಿನಿ ಜಲಾಶಯ ಭರ್ತಿಗೆ ಕೇವಲ ಎರಡೂವರೆ ಅಡಿ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಡ್ಯಾಂ ಭರ್ತಿ ಆಗಲಿದೆ. ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯ ಗರಿಷ್ಠ ಮಟ್ಟ: 2284, ಇಂದಿನ ಮಟ್ಟ: 2281.56, ಒಳಹರಿವು: 5039 ಕ್ಯೂಸೆಕ್, ಹೊರಹರಿವು: 3250 ಕ್ಯೂಸೆಕ್ ಇದೆ.
ಇದನ್ನೂ ಓದಿ: 24 ಗಂಟೆಯಲ್ಲಿ ತುಂಗಭದ್ರೆಗೆ ಹರಿದುಬಂತು ಬರೋಬ್ಬರಿ 4 ಟಿಎಂಸಿ ನೀರು, ರೈತರು ಫುಲ್ ಖುಷ್
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2256.69 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 5509 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 4,000 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಜಿಲ್ಲಾ ವ್ಯಾಪ್ತಿಯ ಶಿಖರಗಳಲ್ಲಿ ಚಾರಣಕ್ಕೆ ನಿಷೇಧ ಹೇರಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಾದ ಭೂ ಕುಸಿತ , ಗುಡ್ಡ ಕುಸಿತ ಪ್ರಕರಣಗಳು, ಇನ್ನಷ್ಟು ಪ್ರಾಕೃತಿಕ ವಿಕೋಪ ಸಂಭವಿಸುವ ಆತಂಕದ ಹಿನ್ನೆಲೆ ಚಾರಣಕ್ಕೆ ತೆರೆಳದಂತೆ ನಿಷೇಧಿಸಲಾಗಿದೆ. ಇನ್ನು ಮಳೆಗಾಲ ಮುಗಿಯುವ ವರೆಗೆ ಹೋಮ್ ಸ್ಟೇ, ರೆಸಾರ್ಟ್ , ಸೇರಿದಂತೆ ಅರಣ್ಯ ಇಲಾಖೆ ಏರ್ಪಡಿಸುವ ಟ್ರಕ್ಕಿಂಗ್, ಸಾಹಸ ಯಾತ್ರೆಗೆ ನಿಷೇಧಿಸಿ ದಕ್ಷಿಣ ಕನ್ನಡ ಡಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:24 am, Sun, 7 July 24