
ಮೈಸೂರು, ಜುಲೈ 15: ಭಾರತಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ. ವಿಶ್ವವೇ ತಿರುಗಿ ನೋಡುವ ಮಟ್ಟಿನ ಆಘಾತ ಎದುರಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಭವಿಷ್ಯ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು. ಮುಂದಾಗುವ ಸಮಸ್ಯೆಗಳನ್ನು ಅರಿತುಕೊಂಡು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ. ಇಲ್ಲವಾದಲ್ಲಿ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಯುಗಾದಿ ಮತ್ತು ಸಂಕ್ರಾಂತಿ ಸಂದರ್ಭದಲ್ಲಿ ಮುನ್ಸೂಚನೆ ಫಲಗಳನ್ನು ತಿಳಿಸಲಾಗುತ್ತದೆ. ಯುಗಾದಿ ಸಂದರ್ಭದಲ್ಲಿ ಮಳೆ, ಬೆಳೆ ಇತ್ಯಾದಿಗಳ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಆಡಳಿತ, ರಾಜಕಾರಣ ಇತ್ಯಾದಿಗಳ ಫಲ ನೋಡಿಕೊಂಡು ಹೇಳುತ್ತೇವೆ. ಸಂಕ್ರಾಂತಿವರೆಗೆ ಏನು ತೊಂದರೆ ಇಲ್ಲ. ಆಮೇಲೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೊಡಿ ಶ್ರೀ ಹೇಳಿದರು.
ಯುದ್ಧಗಳು ಮುಂದುವರೆಯಲಿವೆ. ಮನಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ. ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು. 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು, ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಧ್ಯಾನ ಕೇಂದ್ರಗಳು ಅಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಕೋಡಿಮಠ ಸ್ವಾಮೀಜಿ ಹೇಳಿದರು.
ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಘಾದ ಶಕ್ತಿ ಇದೆ. ಪಂಚತಂತ್ರ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುತ್ತದೆ. ಅವು ದೈವ ವೃಕ್ಷಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.
ಮೂರು ವಾರಗಳ ಹಿಂದಷ್ಟೇ ಅವರು ಇದೇ ರೀತಿಯ ಭವಿಷ್ಯವನ್ನು ಹಾಸನದಲ್ಲಿ ಹೇಳಿದ್ದರು. ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುತ್ತದೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನ ಜೀವನ ಅಸ್ಥಿರಗೊಳ್ಳಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ರಾಜ್ಯ, ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ದೊಡ್ಡ ಗಂಡಾಂತರ: ಕೋಡಿ ಶ್ರೀ ಭಯಾನಕ ಭವಿಷ್ಯ
ಮೇ ತಿಂಗಳಲ್ಲಿ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿ, ಲೋಕಕ್ಕೆ ಜಲ, ವಾಯು ಗಂಡಾಂತರ ಎದುರಾಗಲಿದೆ ಎಂದಿದ್ದರು. ಅಷ್ಟೇ ಅಲ್ಲದೆ, ಹಿಮಾಲಯ ಕರಗಿಹೋಗಲಿದೆ. ಮೇಘಸ್ಫೋಟ ಆಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ ಎಂದಿದ್ದರು. ರಾಜಕೀಯ ಮುಖಂಡರಿಗೆ ಸಾವಿನ ಭಯ ಇದೆ ಎಂದು ಹೇಳಿದ್ದರು.
Published On - 2:07 pm, Tue, 15 July 25