ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಭಾಷೆಯ ದುರುಪಯೋಗ ತಡೆಯಲು ಒಪ್ಪಂದ ಮಾಡಿಕೊಂಡ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ ಮತ್ತು ಕೂ ಆ್ಯಪ್

| Updated By: Pavitra Bhat Jigalemane

Updated on: Dec 06, 2021 | 5:44 PM

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು(Central Institute for Indian Languages) ಕೂ ಆ್ಯಪ್‌ನಲ್ಲಿ ಕಂಟೆಂಟ್ ನಿರ್ವಹಣೆಯ ನೀತಿ ನಿಯಮ ಮತ್ತು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಕೆಲಸ ನಿರ್ವಹಿಸಲಿದೆ. ಜತೆಗೆ ಇದಕ್ಕಾಗಿ ಭಾರತೀಯ ಭಾಷೆಗಳಿಗೆ ಅಗತ್ಯವಿರುವ ಪಠ್ಯ, ತರ್ಕ ಮತ್ತು ವ್ಯಾಕರಣವನ್ನು ವ್ಯಾಖ್ಯಾನಿಸಲಾಗುತ್ತಿದೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಭಾಷೆಯ ದುರುಪಯೋಗ ತಡೆಯಲು ಒಪ್ಪಂದ ಮಾಡಿಕೊಂಡ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ ಮತ್ತು ಕೂ ಆ್ಯಪ್
ಸಾಂದರ್ಭಿಕ ಚಿತ್ರ
Follow us on

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಎನಿಸುವ ಪದಗಳನ್ನು ಪಟ್ಟಿ ಮಾಡುವ ಮೂಲಕ ಸಾಮಾಜಿಕ ಮಾಧ್ಯಮಗಳ ದುರುಪಯೋಗ ತಡೆಯಲು ಮತ್ತು ಭಾರತೀಯ ಭಾಷೆಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸಲು ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆ (CIIL) ಭಾರತದ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆ ಕೂನ ಮಾತೃಸಂಸ್ಥೆ ಬಾಂಬಿನೇಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ ಜೊತೆ ಒಪ್ಪಂದ (MoU) ಮಾಡಿಕೊಂಡಿದೆ.

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ಥಾಪಿಸಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು(Central Institute for Indian Languages) ಕೂ ಆ್ಯಪ್‌ನಲ್ಲಿ ಕಂಟೆಂಟ್ ನಿರ್ವಹಣೆಯ ನೀತಿ ನಿಯಮ ಮತ್ತು ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ಕೆಲಸ ನಿರ್ವಹಿಸಲಿದೆ. ಜತೆಗೆ ಇದಕ್ಕಾಗಿ ಭಾರತೀಯ ಭಾಷೆಗಳಿಗೆ ಅಗತ್ಯವಿರುವ ಪಠ್ಯ, ತರ್ಕ ಮತ್ತು ವ್ಯಾಕರಣವನ್ನು ವ್ಯಾಖ್ಯಾನಿಸಲಾಗುತ್ತಿದೆ. ಈ ರೀತಿ ಪಟ್ಟಿ ಮಾಡಿದ ಶಬ್ದಗಳನ್ನು ಕೂ ಸಂಸ್ಥೆಗೆ ನೀಡುತ್ತದೆ. ಬಳಕೆದಾರ ಅಂತಹ ಆಕ್ಷೇಪಾರ್ಹ ಶಬ್ದಗಳನ್ನು ಕೂನಲ್ಲಿ ಬಳಸಿದಾಗ ಸ್ವತಃ ಆ್ಯಪ್‌ ಶಬ್ದಗಳ ಬಳಕೆಗೆ ತಡೆ ನೀಡಿ, ಬಳಸದಂತೆ ಸೂಚನೆ ನೀಡುತ್ತದೆ. ಈ ಒಪ್ಪಂದದ ಮೂಲಕ ಬಳಕೆದಾರರಿಗೆ ಆನ್‌ಲೈನ್ ಬೆದರಿಕೆ, ನಿಂದನೆಗಳನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವತ್ತ ಗಮನಹರಿಸಲು ಮುಂದಾಗಿದೆ. ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ನಮೂದಿಸಿರುವ22 ಭಾಷೆಗಳಲ್ಲಿನ ಸೂಕ್ಷ್ಮ ಅಥವಾ ಆಕ್ಷೇಪಾರ್ಹ ಪದಗಳು, ಪದಗುಚ್ಛಗಳು ಮತ್ತು ಸಂಕ್ಷಿಪ್ತ ಪದಗಳನ್ನು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಪಟ್ಟಿ ಮಾಡಲಿದೆ. ಇದಕ್ಕಾಗಿ ಕೂ ಸಂಬಂಧಿತ ದತ್ತಾಂಶಗಳನ್ನು ಮತ್ತು ತಾಂತ್ರಿಕ ಸಹಕಾರವನ್ನು ಒದಗಿಸಲಿದೆ. ಈ ಒಪ್ಪಂದವು ಎರಡು ವರ್ಷಗಳವರೆಗೆ ಅಸ್ತಿತ್ವದಲ್ಲಿರಲಿದೆ. ಇದರಿಂದ ಕೂ ಬಳಕೆದಾರರು ಇನಷ್ಟು ಸುರಕ್ಷಿತ ವಾತಾವರಣವನ್ನು ಆನ್‌ಲೈನ್ ಜಗತ್ತಿನಲ್ಲಿ ಪಡೆಯಲಿದ್ದಾರೆ. ಈವರೆಗೆ ಭಾರತೀಯ ಭಾಷೆಗಳಲ್ಲಿ ಇಂತಹ ಯಾವುದೇ ಪ್ರಯತ್ನಗಳೂ ನಡೆದಿಲ್ಲ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಈ ಒಪ್ಪಂದವನ್ನು ಸ್ವಾಗತಿಸಿ ಮಾತನಾಡಿರುವ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್,ಕೂ ಆ್ಯಪ್‌ನಲ್ಲಿ ಸಂವಹನ ನಡೆಸಲು ದೊರೆತಿರುವ ಅವಕಾಶವು ಭಾರತೀಯ ಭಾಷೆಗಳ ಬಳಕೆದಾರರಿಗೆ ಸಂವಿಧಾನಬದ್ಧ ಸಮಾನತೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಒದಗಿಸಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಮುಖ್ಯವಾಗಿ ಕೂ ನಲ್ಲಿ ನಡೆಯುವ ಸಂವಹನದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವಾಗಿದೆ. ಜೊತೆಗೆ ಆಕ್ಷೇಪಾರ್ಹ ಭಾಷೆಯ ಬಳಕೆ ಮತ್ತು ನಿಂದನೆಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ತಿಳಿಸಿದು. ಮುಂದುವರೆದು ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಇರಿಸಬೇಕಿದೆ. ಈ ನಿಟ್ಟಿನಲ್ಲಿ ಕೂನಡೆಸುತ್ತಿರುವ ಪ್ರಯತ್ನ ಗಮನಾರ್ಹ. ಹೀಗಾಗಿ ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯು ಸಾಮಾಜಿಕ ಜಾಲತಾಣವನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಮಾಡುವ ಕೂ ಪ್ರಯತ್ನಕ್ಕೆ ಕೈಜೋಡಿಸಿದೆ ಎಂದು ತಿಳಿಸಿದರು.

ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಕೂ ಸಹ ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ, ಭಾರತದ ಬಹುಭಾಷೆಗಳಲ್ಲಿ ಸಂವಹನ ನಡೆಸುವ ಮತ್ತು ಸಂಪರ್ಕಿಸಲು ನೆರವು ನೀಡುವ ಕೂ ಈ ಒಪ್ಪಂದದ ಮೂಲಕ ತನ್ನ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲಿದೆ. ಬಳಕೆದಾರರು ಭಾಷೆಗಳ ವೈಶಿಷ್ಟ್ಯದ ಜೊತೆಗೆ ಕೂ ಜಾಲತಾಣದಲ್ಲಿ ಸಂವಹನ ನಡೆಸಲು ನಾವು ಬಯಸುತ್ತೇವೆ. ಅಂತರ್ಜಾಲ ಜಗತ್ತನ್ನು ಇನ್ನಷ್ಟು ಸುರಕ್ಷಿತ, ನಂಬಿಕಾರ್ಹ ಮತ್ತು ವಿಶ್ವಾಸಾರ್ಹಗೊಳಿಸಲು ಕೇಂದ್ರೀಯ ಭಾರತೀಯ ಭಾಷೆಗಳ ಸಂಸ್ಥೆಯ ಜೊತೆ ಕೈಜೋಡಿಸಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅವಕಾಶ ಒದಗಿಸುವ ಕೂ ಸದ್ಯ 9 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಅಲ್ಲದೇ 22 ಭಾಷೆಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈಗ ಈ ಒಪ್ಪಂದದ ಮೂಲಕ ಮೈಕ್ರೋ ಬ್ಲಾಗಿಂಗ್‌ ವೇದಿಕೆಯಲ್ಲಿ ಸಮರ್ಪಕ ಕಂಟೆಂಟ್ ನಿರ್ವಹಣೆಯೊಂದಿಗೆ ಜನರು ಉತ್ತಮ ಕಂಟೆಂಟ್‌ಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಿದೆ.

ಇದನ್ನೂ ಓದಿ: 

ಮಾಧ್ಯಮಗಳೊಂದಿಗೆ ಮಾತನಾಡಲು ವೈದ್ಯರು ಆರೋಗ್ಯ ಇಲಾಖೆಯಿಂದ ಪೂರ್ವಾನುಮತಿ ತೆಗೆದುಕೊಳ್ಳಬೇಕು: ಕೇರಳ ಸರ್ಕಾರ

ಒಮಿಕ್ರಾನ್ ವೈರಾಣು ಸೋಂಕು ಹರಡುವಿಕೆ ತಡೆಗಟ್ಟಲು IAS ಅಧಿಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಿ ಸರ್ಕಾರ ಆದೇಶ

Published On - 5:42 pm, Mon, 6 December 21