ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 800 ರೂ. ಟೋಲ್ ಸಂಗ್ರಹ ಆರೋಪ: ತಾಕತ್ ಇದ್ರೆ ಫ್ರೀ ಮಾಡಿ ಎಂದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 800 ರೂ. ಟೋಲ್ ವಿಧಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪ ಮಾಡಿದ್ದಾರೆ.
ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru highway) ಯಲ್ಲಿ 800 ರೂ. ಟೋಲ್ (Toll Collection) ವಿಧಿಸಲಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಎಕ್ಸ್ಪ್ರೆಸ್ ಹೈವೇನಲ್ಲಿ ಎರಡು ಕಡೆ ಟೋಲ್ಗಳಿವೆ. ಹೋಗಲು 400 ಮತ್ತು ಬರಲು 400 ರೂ. ಕೊಡಬೇಕಾಗುತ್ತದೆ ಎಂದು ನನಗೆ ಮಾಹಿತಿಯಿದೆ. ತಾಕತ್ ಇದ್ದರೆ ಹೈವೇನಲ್ಲಿ ಟೋಲ್ ಫ್ರೀ ಮಾಡಿ. ಸಾವಿರಾರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿ ಟೋಲ್ ಯಾಕೆ ವಿಧಿಸುತ್ತೀರಿ ಎಂದು ಪ್ರಶ್ನಿಸಿದರು. ಈಗ ಮೋದಿ ಮೋದಿ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದೀರಿ. ಜನರ ಜೇಬು ಸುಡಲಾರಂಭಿಸಿದ ಮೇಲೆ ಬಂಡವಾಳ ಬಯಲಾಗುತ್ತದೆ ಎಂದು ಆರೋಪಿಸಿದರು.
ಮೋದಿ, ಅಂಬಾನಿ, ಅದಾನಿ ಇರುವವರೆಗೂ ದೇಶ ಉದ್ದಾರವಾಗಲ್ಲ
ಸಂಸತ್ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಸಮರ್ಪಕ ಉತ್ತರ ಕೊಟ್ಟಿಲ್ಲ. ಬೇಡದ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷ ನಾಯಕರನ್ನು ಟೀಕಿಸಲಾಗಿದೆ. ಅದಾನಿ ಸಂಸ್ಥೆಯ ಷೇರುಗಳ ಕುಸಿತದಿಂದ 10 ಲಕ್ಷ ಕೋಟಿ ನಷ್ಟವಾಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 30ನೇ ಸ್ಥಾನಕ್ಕೆ ಕುಸಿದಿದ್ದಾನೆ. ಅದಾನಿ ರಕ್ಷಣೆಗೆ ಮೋದಿ ಸರ್ಕಾರ ಮುಂದಾಗಿದೆ. ಹಾಗಾಗಿಯೇ ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆ ಮಾಡಿಲ್ಲ. ಮೋದಿ ಚುನಾವಣೆ ಎದುರಿಸಲು ಅದಾನಿ ಹಣ ಕೊಟ್ಟಿದ್ದಾನೆ. ಮೋದಿ, ಅಂಬಾನಿ, ಅದಾನಿ ಇರುವವರೆಗೂ ದೇಶ ಉದ್ದಾರವಾಗಲ್ಲ, ಇದು ದೇಶದ ದುರಂತವಾಗಿದೆ ಎಂದು ಎಂ.ಲಕ್ಷ್ಮಣ ಹೇಳಿದರು.
ಇದನ್ನೂ ಓದಿ: Toll Collection: ಐದು ವರ್ಷದಲ್ಲಿ ಕರ್ನಾಟಕ ವಾಹನ ಸವಾರರು ಪಾವತಿಸಿದ ಟೋಲ್ ಮೊತ್ತ ಎಷ್ಟು?
ಫಾಸ್ಟ್ಯಾಗ್ ಎಫೆಕ್ಟ್
ಎರಡು ವರ್ಷಗಳ ಹಿಂದೆ ಚಾಲನೆಗೆ ಬಂದ ಫಾಸ್ಟ್ಯಾಗ್ (FASTag) ವ್ಯವಸ್ಥೆಯಿಂದಾಗಿ ಟೋಲ್ ಸಂಗ್ರಹ ಗಣನೀಯವಾಗಿ ಹೆಚ್ಚಳವಾಗಿದೆ. ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸುವುದರಿಂದ ಟೋಲ್ ಬೂತ್ಗಳಲ್ಲಿ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುವುದಲ್ಲದೇ ಹೆಚ್ಚು ಹೊತ್ತು ಕ್ಯೂ ನಿಲ್ಲುವ ಪರಿಸ್ಥಿತಿಯೂ ನಿಯಂತ್ರಣಕ್ಕೆ ಬರುತ್ತದೆ. ಫಾಸ್ಟ್ಯಾಗ್ ಬಂದ ಬಳಿಕ ಸಂಗ್ರಹವಾಗುತ್ತಿರುವ ಟೋಲ್ ಹಣ ಶೇ. 20ರಷ್ಟಾದರೂ ಹೆಚ್ಚಾಗಿರುವುದು ಅಂಕಿ ಅಂಶಗಳಿಂದಲೇ ಗೊತ್ತಾಗುತ್ತದೆ.
ಐದು ವರ್ಷದಲ್ಲಿ ಅತಿಹೆಚ್ಚು ಟೋಲ್ ಸಂಗ್ರಹವಾದ 5 ರಾಜ್ಯಗಳು
ಉತ್ತರಪ್ರದೇಶ: 17,242.9 ಕೋಟಿ ರೂ
ರಾಜಸ್ಥಾನ: 16,565.9 ಕೋಟಿ ರೂ
ಗುಜರಾತ್: 15,332.2 ಕೋಟಿ ರೂ
ಮಹಾರಾಷ್ಟ್ರ: 13,043.5 ಕೋಟಿ ರೂ
ತಮಿಳುನಾಡು: 12,738 ಕೋಟಿ ರೂ
ಕರ್ನಾಟಕ: 9,982.6 ಕೋಟಿ ರೂ
ಕರ್ನಾಟಕದಲ್ಲಿ 5 ವರ್ಷದಲ್ಲಿ ಸಂಗ್ರಹವಾದ ಟೋಲ್ ಹಣ
2018-19: 1,830.1 ಕೋಟಿ ರೂ
2019-20: 1,814.3 ಕೋಟಿ ರೂ
2020-21; 1,800.1 ಕೋಟಿ ರೂ
2021-22: 2,269.2 ಕೋಟಿ ರೂ
2022-23: 2,268.9 ಕೋಟಿ ರೂ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Fri, 10 February 23