Toll Collection: ಐದು ವರ್ಷದಲ್ಲಿ ಕರ್ನಾಟಕ ವಾಹನ ಸವಾರರು ಪಾವತಿಸಿದ ಟೋಲ್ ಮೊತ್ತ ಎಷ್ಟು?
FASTag Effect: 2018 ಏಪ್ರಿಲ್ನಿಂದ 2022 ಡಿಸೆಂಬರ್ವರೆಗೆ ದೇಶಾದ್ಯಂತ ಹೆದ್ದಾರಿ ಟೋಲ್ಗಳಿಂದ 1.5 ಲಕ್ಷ ಕೋಟಿ ರೂ ಹಣ ಸಂಗ್ರಹವಾಗಿದೆ. ಕರ್ನಾಟಕದಲ್ಲಿ ಇದು 9,982.6 ಕೋಟಿ ರೂ ಆಗಿದೆ ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿದೆ.

ಬೆಂಗಳೂರು: ರಾಜ್ಯದ ವಿವಿಧ ಹೆದ್ದಾರಿಗಳಲ್ಲಿ ಲೆಕ್ಕವಿಲ್ಲದಷ್ಟು ಟೋಲ್ ಬೂತ್ಗಳಿವೆ. ಇಲ್ಲೆಲ್ಲಾ ಅದೆಷ್ಟು ಟೋಲ್ ಸಂಗ್ರಹವಾಗಿರಬಹುದು (Toll Collection) ಎಂದನಿಸಬಹುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (Union Road Transport and Highway Ministry) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿರುವ ಹೆದ್ದಾರಿ ಟೋಲ್ ಬೂತ್ಗಳಿಂದ ಕಳೆದ ಐದು ವರ್ಷಗಳಲ್ಲಿ ಸಂಗ್ರಹವಾದ ಟೋಲ್ ಮೊತ್ತ ಬರೋಬ್ಬರಿ 10 ಸಾವಿರ ಕೋಟಿ ರೂ ಸಮೀಪ ಇದೆ. ಇದು 2018ರ ಏಪ್ರಿಲ್ನಿಂದ 2022ರ ಡಿಸೆಂಬರ್ವರೆಗಿನ ಅಂಕಿ ಅಂಶ.
ಇದು ಕರ್ನಾಟಕದದ್ದಾದರೆ ಭಾರತದಾದ್ಯಂತ ಇರುವ ಟೋಲ್ ಬೂತ್ಗಳಲ್ಲಿ ಅದೆಷ್ಟು ಹಣ ಸಂಗ್ರಹವಾಗಿರಬಹುದು. ಕೇಂದ್ರ ಸಚಿವಾಲಯ ಬಿಡುಗಡೆ ಮಾಡಿದ ಈ ವರದಿ ಪ್ರಕಾರ ದೇಶಾದ್ಯಂತ ವಾಹನ ಸವಾರರಿಂದ ಐದು ವರ್ಷಗಳಲ್ಲಿ ಸಂಗ್ರಹವಾದ ಟೋಲ್ ಹಣ ಒಂದೂವರೆ ಲಕ್ಷ ಕೋಟಿ ರೂ ಅಂತೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹವಾಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಹೊಟೇಲ್ ಕೊಠಡಿಗಳಿಗೆ ಬೇಡಿಕೆ, ಬಹುತೇಕ ಕೊಠಡಿಗಳು ಫುಲ್, ಬೆಲೆಯೂ ಏರಿಕೆ
ಫಾಸ್ಟ್ಯಾಗ್ ಎಫೆಕ್ಟ್
ಎರಡು ವರ್ಷಗಳ ಹಿಂದೆ ಚಾಲನೆಗೆ ಬಂದ ಫಾಸ್ಟ್ಯಾಗ್ (FASTag) ವ್ಯವಸ್ಥೆಯಿಂದಾಗಿ ಟೋಲ್ ಸಂಗ್ರಹ ಗಣನೀಯವಾಗಿ ಹೆಚ್ಚಳವಾಗಿದೆ. ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸುವುದರಿಂದ ಟೋಲ್ ಬೂತ್ಗಳಲ್ಲಿ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುವುದಲ್ಲದೇ ಹೆಚ್ಚು ಹೊತ್ತು ಕ್ಯೂ ನಿಲ್ಲುವ ಪರಿಸ್ಥಿತಿಯೂ ನಿಯಂತ್ರಣಕ್ಕೆ ಬರುತ್ತದೆ. ಫಾಸ್ಟ್ಯಾಗ್ ಬಂದ ಬಳಿಕ ಸಂಗ್ರಹವಾಗುತ್ತಿರುವ ಟೋಲ್ ಹಣ ಶೇ. 20ರಷ್ಟಾದರೂ ಹೆಚ್ಚಾಗಿರುವುದು ಅಂಕಿ ಅಂಶಗಳಿಂದಲೇ ಗೊತ್ತಾಗುತ್ತದೆ.
ಐದು ವರ್ಷದಲ್ಲಿ ಅತಿಹೆಚ್ಚು ಟೋಲ್ ಸಂಗ್ರಹವಾದ 5 ರಾಜ್ಯಗಳು
ಉತ್ತರಪ್ರದೇಶ: 17,242.9 ಕೋಟಿ ರೂ
ರಾಜಸ್ಥಾನ: 16,565.9 ಕೋಟಿ ರೂ
ಗುಜರಾತ್: 15,332.2 ಕೋಟಿ ರೂ
ಮಹಾರಾಷ್ಟ್ರ: 13,043.5 ಕೋಟಿ ರೂ
ತಮಿಳುನಾಡು: 12,738 ಕೋಟಿ ರೂ
ಕರ್ನಾಟಕ: 9,982.6 ಕೋಟಿ ರೂ
ಕರ್ನಾಟಕದಲ್ಲಿ 5 ವರ್ಷದಲ್ಲಿ ಸಂಗ್ರಹವಾದ ಟೋಲ್ ಹಣ
2018-19: 1,830.1 ಕೋಟಿ ರೂ
2019-20: 1,814.3 ಕೋಟಿ ರೂ
2020-21; 1,800.1 ಕೋಟಿ ರೂ
2021-22: 2,269.2 ಕೋಟಿ ರೂ
2022-23: 2,268.9 ಕೋಟಿ ರೂ
ಇದನ್ನೂ ಓದಿ: ದೆಹಲಿ ಏರ್ಪೋರ್ಟ್ನಲ್ಲಿ 5.66 ಕೋಟಿ ಮೌಲ್ಯದ ಚಿನ್ನದ ಬಿಸ್ಕೆಟ್ ಪತ್ತೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊದಲ 9 ತಿಂಗಳಲ್ಲಿ ಸಂಗ್ರಹವಾಗಿರುವ ಮೊತ್ತವು ಹಿಂದಿನ ಇಡೀ ಹಣಕಾಸು ವರ್ಷದ ಕಲೆಕ್ಷನ್ನ ಮಟ್ಟಕ್ಕೆ ಬಂದಿದೆ. ಇದು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
Published On - 7:50 am, Tue, 7 February 23