ಮೈಸೂರು ಅ.23: ವಿಶ್ವವಿಖ್ಯಾತ, ನಾಡಹಬ್ಬ ಮೈಸೂರು ದಸರಾ (Mysore Dasara) ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ರವಿವಾರ ಅರಮನೆ ಮೈದಾನದಲ್ಲಿ ಕುಶಾಲತೋಪು (Kushalatopu) ತಾಲೀಮು ನಡೆದಿದ್ದು, ಈ ವೇಳೆ ಸಿಡಿಮದ್ದು ಸಿಡಿದು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಗಾಯವಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಅ.22) ಸಂಜೆ ಮೈಸೂರು ಅರಮನೆ ಆವರಣದಲ್ಲಿ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗಿತ್ತು. ಈ ವೇಳೆ ಕುಶಾಲತೋಪು ಸಿಡಿದು ಸಿಬ್ಬಂದಿಗೆ ಗಾಯವಾಗಿದೆ.
ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋಪು ಸಿಡಿಸಲಾಗುತ್ತದೆ. ಸಿಡಿಮದ್ದು ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಗುತ್ತದೆ. ಸಶಸ್ತ್ರ ಮೀಸಲು ಪಡೆಯ ಫಿರಂಗಿ ದಳದ 35 ಸಿಬ್ಬಂದಿ ಕುಶಾಲತೋಪು ಸಿಡಿಸುತ್ತಾರೆ. ಫಿರಂಗಿಗೆ ಸಿಡಿಮದ್ದನ್ನು ಹಾಕಿದ ನಂತರ ಅದಕ್ಕೆ ಬೆಂಕಿ ಹೊತ್ತಿಸಲು ರಂಜಕದ ಪುಡಿಯನ್ನು ಹಾಕಲಾಗುತ್ತದೆ.
ಇದನ್ನೂ ಓದಿ: ಮೈಸೂರು ಅರಮನೆಯಲ್ಲಿಂದು ಗತವೈಭವದ ಆಯುಧಪೂಜೆ, ಹೇಗೆಲ್ಲ ನಡೆಯಲಿದೆ? ಇಲ್ಲಿದೆ ಸಂಪೂರ್ಣ ವಿವರ
ಬೆಂಕಿಯನ್ನು ಸಿಬ್ಬಂದಿ ಹಚ್ಚಿದೊಡನೇ ಕುಶಾಲತೋಪುಗಳು ಸಿಡಿಯುತ್ತವೆ. ನಂತರ ಮಿಂಚಿನ ವೇಗದಲ್ಲಿ ನೀರಿನಿಂದ ತೇವಗೊಂಡಿದ್ದ ತೆಂಗಿನವಾರಿನಲ್ಲಿ ಮಾಡಿರುವ ಸಿಂಬವನ್ನು ಬ್ಯಾರಲ್‌ಗೆ ತೂರಿಸಿ ಬೆಂಕಿ ಕಿಡಿ ಹಾಗೂ ಮದ್ದಿನ ಚೂರನ್ನು ಅರಿಸಿ ತೆಗೆಯಲಾಗುತ್ತದೆ. ಇದೇ ವಿಧಾನವನ್ನು ಮೂರು ಬಾರಿ ಸಿಬ್ಬಂದಿ ಮಾಡಿತ್ತಾರೆ. ವಿಜಯದಶಮಿ ದಿನ ರಾಷ್ಟ್ರಗೀತ ಕೇಳಿಬರುವ 53 ಸೆಕೆಂಡುಗಳಲ್ಲಿ ಬ್ಯಾರಲ್ ಅನ್ನು 21 ಬಾರಿ ಸ್ವಚ್ಛಗೊಳಿಸಿ, 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ. ಹೀಗಾಗಿಯೇ ತಾಲೀಮು ನಡೆಸಲಾಗುತ್ತದೆ.
ಜಂಬೂ ಸವಾರಿ ಉದ್ಘಾಟನೆ ವೇಳೆ ಕುಶಾಲತೋಪಿನಿಂದ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಭ್ಯಾಸ ನೀಡಲಾಗುತ್ತದೆ. ಅದರಂತೆ ತಾಲೀಮಿನಲ್ಲಿ ಗಜಪಡೆಯ 14 ಆನೆಗಳು ಹಾಗೂ ಅಶ್ವಾರೋಹಿ ದಳದ 43 ಕುದುರೆಗಳು ಪಾಲ್ಗೊಂಡಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ