ಮೈಸೂರಿನಲ್ಲಿ ಭಾರಿ ಮಳೆ, ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿತ
ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿದಿದೆ. ಭೂಮಿ ಕುಸಿದ ಮಾರ್ಗದಲ್ಲಿ ಸಂಚರಿಸದಂತೆ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ಗಡಿಯಾರ ವೃತ್ತದ ಬಳಿ ಬೈಕ್‌ಗಳು ಮುಳುಗಡೆಯಾಗಿವೆ.
ಮೈಸೂರು: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ. ಇಂದಿನಿಂದ ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಸದ್ಯ ಮೈಸೂರಿನಲ್ಲೂ ಭಾರಿ ಮಳೆಯಾಗಿದ್ದು ಮಳೆ ಆರ್ಭಟಕ್ಕೆ ಜನತೆ ತತ್ತರಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಳೆಗೆ ಭೂಕುಸಿತವಾಗಿದೆ.
ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿದಿದೆ. ಭೂಮಿ ಕುಸಿದ ಮಾರ್ಗದಲ್ಲಿ ಸಂಚರಿಸದಂತೆ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ. ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ಗಡಿಯಾರ ವೃತ್ತದ ಬಳಿ ಬೈಕ್‌ಗಳು ಮುಳುಗಡೆಯಾಗಿವೆ. ಮತ್ತೊಂದೆಡೆ ಮೈಸೂರಿನ ಕುವೆಂಪು ನಗರದಲ್ಲಿರುವ ಪೆಟ್ರೋಲ್ ಬಂಕ್ ಮೇಲ್ಚಾವಣಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಕೆಳಗೆ ಬೀಳದ ಹಿನ್ನೆಲೆ ಅನಾಹುತ ತಪ್ಪಿದೆ.
ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು ಮಂಡ್ಯ ಜಿಲ್ಲೆಯಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ಮಳವಳ್ಳಿ ತಾಲೂಕಿನ ರಾಮಂದೂರು ಸುತ್ತಮುತ್ತ ಜಮೀನಿಗೆ ಮಳೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ.
ಅಕ್ಟೋಬರ್ 25 ಅಥವಾ 26ಕ್ಕೆ ರಾಜ್ಯಕ್ಕೆ ಹಿಂಗಾರು ಪ್ರವೇಶವಾಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮಳೆಯ ಆರ್ಭಟ ಶುರುವಾಗಲಿದೆ. ನಿನ್ನೆ ರಾತ್ರಿಯೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಅ. 23ರವರೆಗೆ ಕರ್ನಾಟಕದಲ್ಲಿ ಮಳೆಯಾಗಲಿದೆ. ಕರ್ನಾಟಕದ 16 ಜಿಲ್ಲೆಗಳಲ್ಲಿ ಇನ್ನು 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಮುಂಗಾರು ಮುಕ್ತಾಯವಾಗಿದೆ. ಆದರೆ, ಚಂಡಮಾರುತ ಮತ್ತು ವಾಯುಭಾರ ಕುಸಿತದಿಂದಾಗಿ ಮಳೆ ಮುಂದುವರೆದಿತ್ತು. ಇಂದಿನಿಂದಲೇ ಕರ್ನಾಟಕಕ್ಕೆ ಹಿಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಹವಾಮಾನ ತಜ್ಞರ ಪ್ರಕಾರ ಅ. 25 ಅಥವಾ 26ರಂದು ಹಿಂಗಾರು ಮಳೆ ಶುರುವಾಗಲಿದೆ. ಇಂದಿನಿಂದ ಅ. 23ರವರೆಗೆ ರಾಜ್ಯದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Karnataka Dam Water Level: ರಾಜ್ಯದಲ್ಲಿ ಇಂದಿನಿಂದ ಮತ್ತೆ ಮಳೆ ಆರ್ಭಟ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Published On - 8:23 am, Thu, 21 October 21