ಟಿ.ನರಸೀಪುರದ ಮುತ್ತತ್ತಿ ಗ್ರಾಮದಲ್ಲಿ ಕೊನೆಗೂ ಸೆರೆಯಾದ ಚಿರತೆ
ಉಡುಪಿಯಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದೆ. ಹಾವೇರಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಮೈಸೂರಿನ ಟಿ.ನರಸೀಪುರದಲ್ಲಿ ಚಿರತೆ ಸೆರೆಯಾಗಿದೆ.
ಮೈಸೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಭೀರಿ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ (Leopard Trapped)ಯಾಗಿದೆ. ದಿಲೀಪ್ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇಟ್ಟಿದ್ದ ಬೋನ್ಗೆ 3 ವರ್ಷದ ಗಂಡು ಚಿರತೆ ಬಿದ್ದಿದೆ. ಕಳೆದ 3-4 ದಿನದ ಹಿಂದೆ ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆ, ಜನರಲ್ಲಿ ಆತಂಕ ಸೃಷ್ಟಿಸಿತ್ತು. ಅದರಂತೆ ಜನರು ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಇದೀಗ ಚಿರತೆ ಸೆರೆಯಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಇದ್ದು. ಈಗಾಗಲೇ ಚಿರತೆ ದಾಳಿಗೆ ಇಬ್ಬರ ಸಾವನ್ನಪ್ಪಿದ್ದರೆ, ಹಲವರಿಗೆ ಗಾಯಗಳಾಗಿವೆ.
ಕಾರ್ಕಳದ ಬಜಗೋಳಿಯಲ್ಲಿ ಬಾವಿಗೆ ಬಿದ್ದ ಚಿರತೆ
ಉಡುಪಿ: ಕಾರ್ಕಳದ ಬಜಗೋಳಿಯಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದೆ (Leopard Fell into well). ಆಹಾರ ಅರಸುತ್ತಾ ಊರಿಗೆ ಬಂದಿದ್ದ ಚಿರತೆ ಶ್ರೀನಿವಾಸ ಆಚಾರ್ಯ ಅವರ ಅಂಗಳಕ್ಕೆ ಕಾಲಿಟ್ಟಿದೆ. ಈ ವೇಳೆ ಚಿರತೆ ಬಾವಿಗೆ ಬಿದ್ದಿದ್ದು. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಗೆ ಬೋನು ಇಳಿಸಿ ಚಿರತೆಯನ್ನು ಮೇಲೆತ್ತಿ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಓಮಿಕ್ರಾನ್ ಹೊಸ ತಳಿ: ಎರಡು ವಾರ ಕಾದು ನೋಡುವ ತಂತ್ರಕ್ಕೆ ಮುಂದಾದ ತಜ್ಞರು
ಮೊಟೆಬ್ಬೆನ್ನುರ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷ
ಹಾವೇರಿ: ಬ್ಯಾಡಗಿ ತಾಲೂಕಿನ ಮೊಟೆಬ್ಬೆನ್ನುರ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷ (Leopard Spotted)ಗೊಂಡಿದೆ. ಸಾಲುಮರದ ತಿಮ್ಮಕ್ಕ ಉದ್ಯಾನವನ ರಾಷ್ಟ್ರೀಯ ಹೆದ್ದಾರಿ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಚಿರತೆ ಓಡಾಡುತ್ತಿರುವ ದೃಶ್ಯ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮದ ಜನರು ಚಿರತೆ ಸೆರೆಗೆ ಆಗ್ರಹಿಸಿದ್ದಾರೆ.
ರಸ್ತೆ ಬದಿ ಚಿರತೆ ಕುಳಿತಿರುವುದನ್ನು ನೋಡಿದ ಟಿಪ್ಪರ್ನಲ್ಲಿದ್ದ ಸಹಾಯಕ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿದ್ದಾರೆ. ಇತ್ತಿಚೆಗೆ ಮಾಸಣಗಿ ಗ್ರಾಮದ ತೋಟದಲ್ಲಿ ನಾಯಿಯೊಂದನ್ನು ಚಿರತೆ ತಿಂದು ಹಾಕಿತ್ತು. ಹೀಗಾಗಿ ಮೊಟೆಬೆನ್ನುರ ಸುತ್ತಮುತ್ತಲಿನ ಗ್ರಾಮದ ಜನರಿಗೆ ಚಿರತೆ ಭಯ ಕಾಡುತ್ತಿದ್ದು, ಚಿರತೆಯನ್ನ ಸೆರೆ ಹಿಡಿಯುವಂತೆ ಒತ್ತಾಯಿಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ