ಮೈಸೂರು, ಜನವರಿ 06): ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ನಾಳೆ (ಜನವರಿ 7) ಮೈಸೂರು ಬಂದ್ ಗೆ ಕರೆ ನೀಡಲಾಗಿದೆ. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ನೀಡಿರುವ ಮೈಸೂರು ಬಂದ್‌ಗೆ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯಾಗಿದ್ದರಿಂದ ಬಂದ್ ಬಿಸಿ ಜೋರಿರಲಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಮೈಸೂರಿನತ್ತ ಹೋಗುವುದಕ್ಕೂ ಮುನ್ನ ಒಮ್ಮೆ ಯೋಚಿಸುವುದು ಒಳಿತು.
ನಾಳೆ (ಮಂಗಳವಾರ) ಮೈಸೂರು ಬಂದ್‌ಗೆ ದಲಿತ ಪರ ಸಂಘಟನೆಗಳು , ರೈತ ಪರ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು, ಕಾರು ಚಾಲಕರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಬೆಂಬಲ ಬೆಂಬಲ ಸೂಚಿಸಿದ್ದು, ನಾಳೆ ಬೆಳಗ್ಗೆಯಿಂದ ಮಧ್ಯಾಹ್ನ 4 ಗಂಟೆ ವರೆಗೆ ಬಂದ್ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ.
ಹೋಟೆಲ್ ಮಾಲೀಕರ ಸಂಘ ಹಾಗೂ ಮೈಸೂರಿನ ಪ್ರವಾಸೋದ್ಯಮ ನೆಚ್ಚಿಕೊಂಡಿರುವ ಇತರ ಉದ್ಯಮಿಗಳು ನಾಳಿನ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದು, ಕಾರ್ಮಿಕರು ಕೈಗೆ ಕಪ್ಪುಪಟ್ಟಿ ಧರಿಸಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳಿನ ಮೈಸೂರು ಬಂದ್‌ಗೆ ಮೈಸೂರು ನಗರ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಬೆಂಬಲ ನೀಡಲಿದ್ದು, ಬಂದ್ನಲ್ಲಿ ಎಲ್ಲ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ. ಶಾಂತಿಯುತ ಬಂದ್‌ಗೆ ನಾವು ಬೆಂಬಲ ನೀಡುತ್ತೇವೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಹೇಳಿದ್ದಾರೆ.
ಮೈಸೂರು ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿದ್ದು, ಬಂದ್ ವಿಚಾರವಾಗಿ ವರ್ತಕರು ಗೊಂದಲದಲ್ಲಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ಜಿಲ್ಲಾಧಿಕಾರಿಗಳು ತೀರ್ಮಾನ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂದು ಮೈಸೂರು ಸಂಪರ್ಕಿಸುವ ಎಲ್ಲ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ತಡೆ ಹಿಡಿಯಲು ತೀರ್ಮಾನಿಸಲಾಗಿದೆ. ಹೀಗಾಗಿ ಮೈಸೂರಿಗೆ ಭೇಟಿ ನೀಡುವವರು ಗಮನಿಸಬೇಕು. ಯಾಕಂದ್ರೆ ಯಾವುದೇ ಅಂಗಡಿಗಳು ತೆರದಿರುವುದಿಲ್ಲ. ಹಾಗೇ ವಾಹನ ಸಂಚಾರ ಅಷ್ಟಕ್ಕಷ್ಟೇ. ಆಟೋ ಸಂಚಾರ ಸಹ ಇರುವುದಿಲ್ಲ.
ಇನ್ನು ಪ್ರತಿಭಟನೆಕಾರರು ಅಲ್ಲಲ್ಲಿ ರಸ್ತೆಗಳನ್ನು ಬಂದ್ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಯಾವುದುಕ್ಕೂ ಮುಂಜಾಗ್ರತಾ ಕ್ರಮವಾಗಿ ನಾಳಿನ ಮೈಸೂರು ಪ್ರವಾಸ ಪ್ಲಾನ್ ಮುಂದೂಡುವುದು ಬೆಸ್ಟ್.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ನಾಳೆ ಮಂಡ್ಯ ನಗರ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ದಲಿತ, ರೈತ, ಅಲ್ಪಸಂಖ್ಯಾತ, ಹಿಂದುಳಿದ ಒಕ್ಕೂಟದ ವತಿಯಿಂದ ಬೆಳಗ್ಗೆ 6ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ. ಅಲ್ಲದೆ ಬೃಹತ್ ಪ್ರತಿಭಟನೆಯನ್ನ ಕೂಡ ನಡೆಸಲು ಹೋರಾಟಗಾರರು ಸಜ್ಜಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.