ಅಧಿಕಾರಕ್ಕೆ ಬಂದು ತಿಂಗಳಲ್ಲೇ ಕಾಂಗ್ರೆಸ್ ಶಾಸಕ, ಸಚಿವರ ಕುಟುಂಬಸ್ಥರ ದರ್ಬಾರ್ ಶುರು: ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವರ ಪುತ್ರ, ವಿಡಿಯೋ ವೈರಲ್
ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಪುತ್ರ ನಿತಿನ್ ವೆಂಕಟೇಶ್ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಜನೆ ಒಂದಕ್ಕೆ ಚಾಲನೆ ನೀಡಿದ್ದಾರೆ.
ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ 2.O ಸರ್ಕಾರ ಅಧಿಕಾರದಲ್ಲಿದ್ದು ಫುಲ್ ಆಕ್ಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಚುನಾವಣಾ ಪೂರ್ವ ಭರವಸೆ ನೀಡಿದ್ದ 5 ಗ್ಯಾರೆಂಟಿಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ (Karnataka Government) ಬ್ಯೂಸಿಯಾಗಿದೆ. ಆದರೆ ಇದರ ಮಧ್ಯೆ ಆಡಳಿತದಲ್ಲಿ ಸಚಿವರ (Ministers) ಮತ್ತು ಶಾಸಕರ (MLA) ಕುಟುಂಬಸ್ಥರು ಮೂಗು ತೋರಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಹೌದು ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಸಚಿವರ ಮತ್ತು ಶಾಸಕರ ಕುಟುಂಬಸ್ಥರ ದರ್ಬಾರ್ ಜೋರಾಗಿದ್ದು, ವಿಪಕ್ಷಗಳ ಟೀಕೆಗೆ ಮತ್ತು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪುರಾವೆ ಎಂಬಂತೆ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ (K Venkatesh) ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಪುತ್ರ ನಿತಿನ್ ವೆಂಕಟೇಶ್ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಜನೆ ಒಂದಕ್ಕೆ ಚಾಲನೆ ನೀಡಿದ್ದಾರೆ.
ಹೌದು ಇತ್ತೀಚಿಗೆ ಚಾಲನೆ ದೊರೆತ ಶಕ್ತಿ ಯೋಜನೆಗೆ ಸಚಿವ ವೆಂಕಟೇಶ್ ಪುತ್ರ ಚಾಲನೆ ನೀಡಿರುವ ಚಾಲನೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಪಿರಿಯಾಪಟ್ಟಣದಲ್ಲಿ ನಡೆದಿದ್ದ ಶಕ್ತಿ ಯೋಜನೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ನಿತಿನ್ ವೆಂಕಟೇಶ್ ಕಾಣಿಸಿಕೊಂಡಿದ್ದರು. ತಂದೆ ಕೆ.ವೆಂಕಟೇಶ್ ಅನುಪಸ್ಥಿತಿಯಲ್ಲಿ ಪುತ್ರ ನಿತಿನ್ ವೆಂಕಟೇಶ್ ಚಾಲನೆ ನೀಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕನ ಪುತ್ರನಿಂದ ಬೆದರಿಕೆ
ಇನ್ನು ಕಲಬುರಗಿ ಜಿಲ್ಲೆಯ ಅಫಜಲಪುರ ಶಾಸಕ ಎಮ್ ವೈ ಪಾಟೀಲ್ ಅವರ ಪುತ್ರ ಅರುಣ್, ಸರ್ಕಾರಿ ಶಾಲೆ ಪ್ರಭಾರಿ ಮುಖ್ಯೋಪಾಧ್ಯಾಯ ಶಿವಕುಮಾರ್ ಬಿರಾದಾರ ಅವರಿಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಆಡಿಯೋ ವೈರಲ್ ಆಗಿದ್ದು, ಶಿವಕುಮಾರ್ ಬಿರಾದಾರ ಅವರು ಅಫಜಲಪುರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಸ್ತ್ರೀ ಸ್ವ ಸಹಾಯ ಸಂಘಗಳ ಸಾಲ ಮನ್ನಾ ವಿಚಾರ; ಗ್ರಾಮದಲ್ಲಿ ಮಹಿಳೆಯರಿಂದ ಪ್ಲೆಕ್ಸ್ ಹಾಕಿ ಸಾಲ ಕೇಳಲು ಬಾರದಂತೆ ಎಚ್ಚರಿಕೆ
ಆಡಿಯೋದಲ್ಲಿ ಏನಿದೆ?
ಅಫಜಲಪುರ ತಾಲೂಕಿನ ಮಾಶಾಳ ಸರ್ಕಾರಿ ಮಾದರಿ ಶಾಲೆ ಪ್ರಭಾರಿ ಮುಖ್ಯೋಪಾಧ್ಯಾಯ ಶಿವಕುಮಾರ್ ಅವರು ತಮ್ಮ ಜೊತೆ ಶಾಸಕರ ಪುತ್ರ ಅರುಣ್ ಮಾತನಾಡಿರೋ ಆಡಿಯೋವನ್ನ ಪೊಲೀಸ್ ಠಾಣೆಗೆ ನೀಡಿದ್ದಾರೆ. ಅದರಲ್ಲಿ “ಶಿವಕುಮಾರ್ ಅವರಿಗೆ ನೀನು ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಡ. ಮಾಡಿದ್ರು, ಅದನ್ನು ರದ್ದು ಮಾಡಬೇಕು. ನೀನು ಶಾಲೆಯಿಂದ ಜಾಗ ಖಾಲಿ ಮಾಡಬೇಕು. ಇಲ್ಲದಿದ್ದರೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಲಾಗಿದೆ.
ಸಚಿವೆಯ ಕಚೇರಿಯಲ್ಲಿ ಕಾಣಿಸಿಕೊಂಡ ಸಹೋದರ
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಯಲ್ಲಿ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಮಾಧ್ಯಮದವರ ಜತೆ ದರ್ಪ ಪ್ರದರ್ಶಿಸಿದ್ದು ಟೀಕೆಗೆ ಗುರಿಯಾಗಿತ್ತು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ಎಂಎಲ್ಸಿ ಚೆನ್ನರಾಜ್ ಹಟ್ಟಿಹೊಳಿ, ಗ್ಯಾರಂಟಿ ಯೋಜನೆಗಳ ಕುರಿತಾದ ಅನುಮಾನಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ತೆರಳಿದ್ದ ಮಾಧ್ಯಮದವರ ಮುಂದೆ ದರ್ಪದಿಂದ ವರ್ತಿಸಿದ್ದ ಚೆನ್ನರಾಜ್ ಹಟ್ಟಿಹೊಳಿ, ಏನೂ ಉತ್ತರ ಕೊಡಲ್ಲ ನಡೀರಿ ಇಲ್ಲಿಂದ ಎಂದು ಆವಾಜ್ ಹಾಕಿದ್ದರು. ಇಷ್ಟೇ ಅಲ್ಲದೆ, ಜನರ ಪತ್ರಗಳಿಗೂ ತಾವೇ ಸಹಿ ಹಾಕುತ್ತಾ ಕುಳಿತಿದ್ದರು. ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಸುಮ್ಮನೇ ಕುಳಿತಿದ್ದರು.
ಆ ವಿಚಾರವಾಗಿ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್‌ನ ಸಂಸ್ಕಾರವೇ ಇಷ್ಟು ಎಂದು ಟೀಕಿಸಿತ್ತು.