ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್ ನಾಪತ್ತೆ: ಸಾಕ್ಷ್ಯ ನಾಶಕ್ಕೆ ಮುಂದಾದ್ರಾ ಅಧಿಕಾರಿಗಳು?

| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2024 | 6:04 PM

ಮುಡಾ ಹಗರಣ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಆದ್ರೆ, ಇದೀಗ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಕೇಸ್​ನಲ್ಲಿ ಸಾಕ್ಷ್ಯ ನಾಶದ ಗುಮಾನಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ ಇದ್ದ ಸಿಸಿ ಕ್ಯಾಮರಾಗಳು ಹಾಗೂ ಡಿವಿಆರ್ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದ್ದು, ಮುಡಾ ಪ್ರಕರಣದಲ್ಲಿ ಸಾಕ್ಷ್ಯ ನಾಶ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್ ನಾಪತ್ತೆ: ಸಾಕ್ಷ್ಯ ನಾಶಕ್ಕೆ ಮುಂದಾದ್ರಾ ಅಧಿಕಾರಿಗಳು?
ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿ ಕ್ಯಾಮರಾ, ಡಿವಿಆರ್ ನಾಪತ್ತೆ
Follow us on

ಮೈಸೂರು, (ಸೆಪ್ಟೆಂಬರ್ 10): ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ. ಮುಡಾ ಆಯುಕ್ತರ ಕಚೇರಿಗಿಂತ, ಆಯುಕ್ತರ ನಿವಾಸವನ್ನೇ ವ್ಯವಹಾರಕ್ಕೆ ಬದಲಾಯಿಸಿದ್ರಾ ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೌದು.. ಮೈಸೂರು ಮುಡಾ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.‌ ಕರ್ತವ್ಯ ಲೋಪ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಸಸ್ಪೆಂಡ್ ಆಗಿರುವ ಜಿ.ಟಿ. ದಿನೇಶ್ ಕುಮಾರ್ ವಾಸವಿದ್ದ ಆಯುಕ್ತರ ನಿವಾಸದಲ್ಲಿ ಸಿಸಿಟಿವಿ, ಡಿವಿಆರ್ ನಾಪತ್ತೆಯಾಗಿರೋದು ಸಾಕಷ್ಟು ಅನುಮಾನ ಮೂಡಿಸಿದೆ.

ಮೈಸೂರಿನ ಕುವೆಂಪುನಗರದ ಆದಿ ಚುಂಚನಗಿರಿ ರಸ್ತೆಯ ಆಯುಕ್ತರ ನಿವಾಸದಲ್ಲಿ ಹಿಂದಿನ ಆಯುಕ್ತರು ಕಚೇರಿಗಿಂತ ಹೆಚ್ಚು ಇದೇ ನಿವಾಸದಲ್ಲಿ ಕಾರ್ಯನಿರ್ವಾಹಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. 50:50 ಅನುಪಾತ, ಬದಲಿ ನಿವೇಶನ, ತುಂಡು ಭೂಮಿ ಅನ್ಯಕ್ರಾಂತ ಸೇರಿದಂತೆ ಹಲವು ವ್ಯವಹಾರಗಳಿಗೆ ಈ ನಿವಾಸ ಕೇಂದ್ರ ಬಿಂದುವಾಗಿತ್ತು ಅನ್ನೋ ಆರೋಪ ಇದೆ. ಇದೆಲ್ಲದಕ್ಕೂ ಸಾಕ್ಷಿಯಂತಿದ್ದ 8 ಸಿಸಿ ಕ್ಯಾಮರಾ ಡಿವಿಆರ್ ನಾಪತ್ತೆಯಾಗಿರುವುದು ಹಿಂದಿನ ಆಯುಕ್ತ ಜಿ.ಟಿ. ದಿನೇಶ್ ಮೇಲೆ ಅನುಮಾನ ಮೂಡಿಸಿದೆ.

ಇದನ್ನೂ ಓದಿ: 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಸೈಟ್​​​ ಹಂಚಿಕೆ ಆರೋಪ: ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ನೋಟಿಸ್

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಡಾ ನೂತನ ಆಯುಕ್ತ ರಘುನಂದನ್ , ಮುಡಾ ಕಟ್ಟಡ ನಿರ್ವಹಣೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದೇನೆ. ಅಲ್ಲಿ ಇದ್ದ ಸಿಸಿ ಕ್ಯಾಮರಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದು, ಎರಡು ದಿನಗಳಲ್ಲಿ ಮಾಹಿತಿ ತರಿಸಿಕೊಂಡು ಹೇಳುತ್ತೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಮುಡಾ ಆಯುಕ್ತದ ನಿವಾಸದಲ್ಲಿ ಸಾಕ್ಷ್ಯ ನಾಶ ಆರೋಪಕ್ಕೆ ಇಂಬು ನೀಡುವಂತೆ ಸಿಸಿಟಿವಿ, ಡಿವಿಆರ್ ನಾಪತ್ತೆ ಸಾಕಷ್ಟು ಆನುಮಾನ ಮೂಡಿಸಿದೆ. ಈ ಬಗ್ಗೆ ಅಧಿಕಾರಿಗಳು ಯಾವ ರೀತಿ ವರದಿ ನೀಡುತ್ತಾರೆ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ