ಬೆಂಗಳೂರು: ಮುಡಾ ಹಗರಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮುಡಾ ಕ್ಲೀನ್ಗೆ ಮೊದಲ ಹೆಜ್ಜೆ ಇಟ್ಟಿರುವ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ 48 ಸೈಟ್ಗಳನ್ನು ರದ್ದು ಮಾಡಿದ್ದಾರೆ. ಹಿಂದಿನ ಮುಡಾ ಆಯುಕ್ತ ದಿನೇಶ್ ಕುಮಾರ್ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ 48 ಜನರಿಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಸೈಟ್ ಗಳನ್ನು 5-6 ಲಕ್ಷಕ್ಕೆ ಹಂಚಿದ್ದರು. ಅದನ್ನು ಇದೀಗ ರದ್ದುಪಡಿಸಲಾಗಿದೆ.
ಅಸ್ತಿತ್ವವೇ ಇಲ್ಲದೆ ಸಹಕಾರ ಸಂಘದ ಹೆಸರಿನಲ್ಲಿ ಸೈಟ್ಗಳನ್ನು ದಿನೇಶ್ ಕುಮಾರ್ ಹಂಚಿಕೆ ಮಾಡಿದ್ದರು. ಚಾಮುಂಡೇಶ್ವರಿ ನಗರ ಸರ್ವೊದಯ ಸಂಘದ ಸದಸ್ಯರು ಎಂದು ಹಂಚಿಕೆ ಮಾಡಿದ್ದರು. ಸೈಟ್ ಹಂಚಿಕೆಯಲ್ಲಿ ಬೇನಾಮಿ ಇದೆ ಎಂಬ ಆರೋಪ ಬಂದಿತ್ತು. ಇದು ಬಹುದೊಡ್ಡ ಅಕ್ರಮ ಎಂದು ಹಿಂದಿನ ಜಿಲ್ಲಾಧಿಕಾರಿ ರಾಜೇಂದ್ರ ವರದಿ ಕೊಟ್ಟಿದ್ದರು.
ಇದನ್ನೂ ಓದಿ: ಪಂಚೆಯುಟ್ಟು ಹ್ಯಾಟ್ ತೊಟ್ಟು ಕೈಯಲ್ಲಿ ಬ್ಯಾಟ್ ಹಿಡಿದು ಒಂದೇ ಎಸೆತ ಎದುರಿಸಿ ಹಿಂದೆ ಸರಿದ ಸಿದ್ದರಾಮಯ್ಯ!
ಆ ವರದಿಯನ್ನು ಆಂತರಿಕವಾಗಿ ತನಿಖೆ ಮಾಡಿಸಿದ್ದ ರಾಜ್ಯ ಸರ್ಕಾರ ನಿನ್ನೆ ರಾತ್ರೋ ರಾತ್ರಿ ಎಲ್ಲಾ 48 ಸೈಟ್ ಗಳನ್ನು ರದ್ದು ಪಡಿಸಿದೆ. ಈ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್ ಆದೇಶ ಹೊರಡಿಸಿದ್ದಾರೆ.
48 ಸೈಟ್ಗಳ ಖಾತೆ ನೋಂದಣಿ ಖಾತೆ ವರ್ಗಾವಣೆ ಮಾಡದಂತೆ ನಗರ ಪಾಲಿಕೆ ಆಯುಕ್ತರಿಗೆ ಮತ್ತು ಜಿಲ್ಲಾ ನೋಂದಣಾಧಿಕಾರಿಗೆ ರಘುನಂದನ್ ಪತ್ರ ಬರೆದಿದ್ದಾರೆ. 48 ಸೈಟ್ ಗಳ ವಿವರದ ಜೊತೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಇನ್ನು, ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಕಷ್ಟ ಎದುರಾಗಿದೆ. ಮುಡಾದಿಂದ 14 ಸೈಟ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಹಸ್ತಾಂತರಿಸಿರುವ ಕುರಿತು ಅಕ್ರಮಗಳು ನಡೆದಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 pm, Tue, 3 December 24