ಮೈಸೂರು, ಆಗಸ್ಟ್ 2: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಶೋಕಾಸ್ ನೀಡಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಇದಕ್ಕೆಲ್ಲ ನಾನು ಹೆದರಲ್ಲ. ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಹೆದರುವುದು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಜೆಡಿಎಸ್, ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ್ದಾರೆ. 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು ಎಂದರು.
ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ನೋಟಿಸ್ಗೆ ನಾನೇಕೆ ಹೆದರಲಿ. ಅಶೋಕ್ ಹೆದರಿರಬೇಕು ಅವರಿಗೆ ಭಯ ನನಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಟಿಜೆ ಅಹ್ರಾಂ ಒಬ್ಬ ಬ್ಲ್ಯಾಕ್ಮೇಲರ್. ಜುಲೈ 26 ಕ್ಕೆ ಬೆಳಿಗ್ಗೆ 11:30 ಕ್ಕೆ ಆತ ದೂರು ಕೊಡುತ್ತಾನೆ. ಆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಎಂದು ನಮ್ಮ ಅಧಿಕಾರಿ ಎಲ್ಕೆ ಅತೀಕ್ಗೆ ಹೇಳುತ್ತಾರೆ. ಜೊಲ್ಲೆ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನೂ ಹಾಗೆಯೇ ಇವೆ. ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಅನುಮತಿ: ಕಾಂಗ್ರೆಸ್ ಸರ್ಕಾರದಿಂದ ಮಹತ್ವದ ನಿರ್ಧಾರ
ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್ಡಿಕೆ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮುಡಾ ಕೇಸ್ನಲ್ಲಿ ಏನೂ ಇಲ್ಲ, ಪಾದಯಾತ್ರೆ ಬೇಡ ಅಂದಿದ್ದರು. ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ನೆರೆ ಪರಿಸ್ಥಿತಿ ಅವಲೋಕಿಸಿ, ಜನರ ಸಮಸ್ಯೆ ಸ್ಪಂದಿಸಿ ಅಂದಿದ್ದರು. ಬಿಜೆಪಿಯವರ ಒತ್ತಡಕ್ಕೆ ಮಣಿದು ಪಾದಯಾತ್ರೆ ಬೆಂಬಲಿಸಿದ್ದಾರೆ. ಹಾಗಾದರೆ ಈಗ ಮಳೆ ಹಾನಿ, ಪ್ರವಾಹ ಹೋಗಿದೆಯಾ? ಹೆಚ್.ಡಿ.ಕುಮಾರಸ್ವಾಮಿ ಸ್ವಇಚ್ಛೆಯಿಂದ ಇದನ್ನು ಮಾಡುತ್ತಿಲ್ಲ. ಇದನ್ನೆಲ್ಲ ನಾವು ಎದುರಿಸಲು ಸಿದ್ಧರಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ