ಮೂಡಾ ನಿವೇಶನ ಅಕ್ರಮ: ಸಿಎಂ ಪತ್ನಿಗೆ 2 ಸಾವಿರ ಬೆಲೆಯ ಭೂಮಿ ಬದಲಾಗಿ 10 ಸಾವಿರಕ್ಕೂ ಹೆಚ್ಚು ಬೆಲೆಯ ಭೂಮಿ ಕೊಟ್ಟಿದೆ ಮೂಡಾ
ಸಿಎಂ ಸಿದ್ದರಾಮಯ್ಯ ಪತ್ನಿಗೆ ಮೂಡಾ ನಿವೇಶನ ಮಂಜೂರು ಪ್ರಕರಣಕ್ಕೆ ಸಂಬಂಧಿಸಿ ಮೂಡಾ 2 ಸಾವಿರ ಬೆಲೆಯ ಭೂಮಿ ಬದಲಾಗಿ 10 ಸಾವಿರಕ್ಕೂ ಹೆಚ್ಚು ಬೆಲೆಯ ಭೂಮಿ ಕೊಟ್ಟಿದೆ. ಇನ್ನು ಮತ್ತೊಂದೆಡೆ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ.
ಮೈಸೂರು, ಜುಲೈ.03: 50:50 ಅನುಪಾತದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಪತ್ನಿಗೆ ಮೂಡಾ (Muda) ನಿವೇಶನ ಮಂಜೂರು ಪ್ರಕರಣಕ್ಕೆ ಸಂಬಂಧಿಸಿ ಮೂಡಾ 2 ಸಾವಿರ ಬೆಲೆಯ ಭೂಮಿ ಬದಲಾಗಿ 10 ಸಾವಿರಕ್ಕೂ ಹೆಚ್ಚು ಬೆಲೆಯ ಭೂಮಿ ಕೊಟ್ಟಿದೆ. ಮೂಡಾ ನಡೆಯ ವಿರುದ್ಧ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ರಿಂಗ್ ರಸ್ತೆಯ ಹೊರವಲಯ ದೇವನೂರು ಬಡವಾಣೆಯಲ್ಲಿ ವಶಪಡಿಸಿಕೊಂಡಿದ್ದ ಭೂಮಿ ಪ್ರಸ್ತುತ ಚದರ ಅಡಿಗೆ 2 ರಿಂದ 3 ಸಾವಿರ ಹಣ ನಿಗದಿ ಮಾಡಲಾಗಿದೆ. ಅದಕ್ಕೆ ಬದಲಾಗಿ ಸಿಎಂ ಪತ್ನಿ ಪಾರ್ವತಿ ಅವರಿಗೆ ವಿಜಯನಗರದ ಎರಡು ಹಂತಗಳಲ್ಲಿ 14 ಸೈಟ್ ಮಂಜೂರು ಮಾಡಲಾಗಿದೆ.
ಅಲ್ಲಿ ಚದರ ಅಡಿಗೆ ಕನಿಷ್ಟ 10 ಸಾವಿರ ಬೆಲೆ ಇದೆ. ಮೂಡಾ ನೀಡಿರುವ ಬದಲಿ ನಿವೇಶನದ ಸುತ್ತಾ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಪ್ರಸ್ತುತ ವಿಜಯನಗರದ 3ನೇ ಹಂತ ಇ ಬ್ಲಾಕ್‌ನಲ್ಲಿ 4, ಡಿ ಬ್ಲಾಕ್‌ನಲ್ಲಿ 2, ಜಿ ಬ್ಲಾಕ್ ಹಾಗೂ ಸಿ ಬ್ಲಾಕ್ ನಲ್ಲಿ ತಲಾ ಒಂದು ಸೈಟ್ ಮಂಜೂರಾಗಿದೆ. ಅದೇ ರೀತಿ ವಿಜಯನಗರ 4ನೇ ಹಂತ 2ನೇ ಫೇಸ್‌ನಲ್ಲಿ 6 ಸೈಟ್ ನೀಡಲಾಗಿದೆ.
ಇನ್ನು ಈ ಹಿಂದೆಯೇ ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ 15 ಪತ್ರ ಬರೆದಿದ್ದರು. ತುರ್ತು ಕ್ರಮಕ್ಕೆ ಸಮಿತಿ ರಚಿಸಲು ಶಿಫಾರಸ್ಸು ಮಾಡಿದ್ದರು. ಸಾಕಷ್ಟು ಅಂಶಗಳನ್ನು ತಿಳಿಸಿ ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಹಾಗೂ ಫೆ 8ರಿಂದ ಮುಡಾ ಆಯುಕ್ತರಾಗಿ ಸ್ಪಷ್ಟನೆ ಕೇಳಿ ನಿರಂತರವಾಗಿ ಪತ್ರ ಬರೆದಿದ್ದರು. ಆದರೆ ಮೈಸೂರು ಡಿಸಿ ಪತ್ರಗಳಿಗೆ ಆಯುಕ್ತರು ಯಾವುದೇ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ: ಮೂಡಾ ವಿರುದ್ಧ 2.5 ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ಆರೋಪ
ಇನ್ನು ಮತ್ತೊಂದೆಡೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂಕಬಳಿಕೆದಾರರಿಗೆ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ತಿಳಿಸಿದ್ದಾರೆ.
ಸೋಮವಾರ ಮೈಸೂರಿಗೆ ಆಗಮಿಸಿ ಮುಡಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬೈರತಿ ಸುರೇಶ್ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 50:50 ಯೋಜನೆಯಡಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಸರಕಾರ ಆದೇಶಿಸಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:59 am, Wed, 3 July 24