ಮೈಸೂರು, ಮಾರ್ಚ್ 16: 11 ವರ್ಷಗಳ ಹಿಂದೆ ನಡೆದಿದ್ದ ಇಲವಾಲ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದಲ್ಲಿ ಚಿನ್ನ ಕಳ್ಳಸಗಾಣಿಕೆಯಲ್ಲಿ (Gold Smuggling) ಬಂಧಿತವಾಗಿರುವ ರನ್ಯಾ ರಾವ್ (Ranya Rao) ಅವರ ಮಲತಂದೆ ಐಜಿಪಿ ರಾಮಚಂದ್ರ ರಾವ್ (Ramchandra Rao) ಹೆಸರು ತಳಕು ಹಾಕಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದಿದ್ದಾರೆ.
ಅಂದು ಚಿನ್ನ ಕಳ್ಳಸಾಗಣೆ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಪ್ರಕರಣ ಮುಚ್ಚಿ ಹಾಕಿದ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಸಿಬಿಐಗೆ 9 ಪುಟಗಳ ಪತ್ರ ಬರೆದಿದ್ದಾರೆ. ಅಂದಿನ ಸಿಐಡಿ ಡಿಜಿಪಿ ಕಿಶೋರ್ಚಂದ್ರ, ಸಿಐಡಿ ಐಜಿಪಿ ಪ್ರಣವ್ ಮೊಹಂತಿ, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಭಟ್, ಡಿವೈಎಸ್‌ಪಿ ರಾಘವೇಂದ್ರ ಹೆಗ್ಡೆ, ಅಂದಿನ ಮೈಸೂರು ಎಸ್ಪಿ ಅಭಿನವ ಖರೆ, ಡಿವೈಎಸ್‌ಪಿ ವಿಕ್ರಂ ಆಮ್ಟೆ, ಇಲವಾಲ ಪಿಎಸ್ಐ ಗಣೇಶ್ ಸೇರಿ ಹಲವರ ವಿರುದ್ಧ ಸಿಬಿಐಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ನಟಿ ರನ್ಯಾ ರಾವ್ ಪ್ರಕರಣದ ಜೊತೆಗೆ ಇದನ್ನು ಸೇರಿಸಿಕೊಂಡು ತನಿಖೆ ಮಾಡಬೇಕು. ಸಾಧ್ಯವಾಗದಿದ್ದರೆ ಪ್ರತ್ಯೇಕ ಪ್ರಕರಣವಾಗಿ ತನಿಖೆ ನಡೆಸಿ. 2014ರಿಂದಲೇ ಈ ರೀತಿ ಚಿನ್ನ ಕಳ್ಳಸಾಗಣೆ ನಡೆದುಕೊಂಡು ಬರುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರೇ, ಇಂತಹ ಪ್ರಕರಣ ತಡೆಯಬಹುದಿತ್ತು ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಾಟ: ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ
2014ರಲ್ಲಿ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ 2.27 ಕೋಟಿ ಹಣ ಹಾಗೂ 2 ಕೆಜಿ ಚಿನ್ನ ದರೋಡೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಿದ್ದರು. ಅಂದಿನ ದಕ್ಷಿಣ ವಲಯದ ಐಜಿಪಿ ರಾಮಚಂದ್ರ ರಾವ್ ಗನ್‌ಮ್ಯಾನ್, ದಕ್ಷಿಣ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್‌ಪಿ ಸ್ಕ್ವಾಡ್ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ದರು. ಆದರೆ, ಈವರೆಗೂ ಗೋಲ್ಡ್ ಸ್ಮಗ್ಲಿಂಗ್ ಹಾಗೂ ಹವಾಲಾ ಹಣದ ಮೂಲದ ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಇದೀಗ, ಸ್ನೇಹಮಯಿ ಕೃಷ್ಣ ದೂರಿನಿಂದ ಪ್ರಕರಣ ಮತ್ತೆ ಮರುಜೀವ ಪಡೆದುಕೊಂಡಿದೆ.