ಪಾಲಿಕೆಯ ಕಚೇರಿಯಲ್ಲಿ ಸಿಗರೇಟ್ ಸೇದಬೇಡ ಎಂದ ರೆವೆನ್ಯೂ ಇನ್ಸ್​​ಪೆಕ್ಟರ್​​ಗೆ ಹಿಗ್ಗಾಮುಗ್ಗ ಥಳಿಸಿದ ಯುವಕ

ಸರ್ಕಾರಿ ಕಚೇರಿ ಆವರಣದಲ್ಲಿ ಸಿಗರೇಟ್ ಸೇದದಂತೆ ತಿಳಿವಳಿಕೆ ಹೇಳಿದ್ದಕ್ಕೇ ರೊಚ್ಚಿಗೆದ್ದ ಯುವಕ ಅಧಿಕಾರಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗೆ ಬಾ ನೋಡಿಕೊಳ್ಳುತ್ತೇನೆ ಅಂತಾ ಧಮ್ಕಿ ಹಾಕಿರುವ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

ಪಾಲಿಕೆಯ ಕಚೇರಿಯಲ್ಲಿ ಸಿಗರೇಟ್ ಸೇದಬೇಡ ಎಂದ ರೆವೆನ್ಯೂ ಇನ್ಸ್​​ಪೆಕ್ಟರ್​​ಗೆ ಹಿಗ್ಗಾಮುಗ್ಗ ಥಳಿಸಿದ ಯುವಕ
ಸಿಗರೇಟ್ ಸೇದಬೇಡ ಎಂದ ಇನ್ಸ್​​ಪೆಕ್ಟರ್​​ಗೆ ಹಿಗ್ಗಾಮುಗ್ಗ ಥಳಿಸಿದ ಯುವಕ
Updated By: ಸಾಧು ಶ್ರೀನಾಥ್​

Updated on: Dec 08, 2023 | 5:04 PM

ಇತ್ತೀಚೆಗೆ ಬುದ್ದಿ ಹೇಳೋದಕ್ಕೂ ಹೆದರಬೇಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.‌ ಇದಕ್ಕೆ ಕಾರಣ ಮೈಸೂರಿನಲ್ಲಿ ನಡೆದ ಘಟನೆ. ಸರ್ಕಾರಿ ಕಚೇರಿಯ ಆವರಣದಲ್ಲಿ ಸಿಗರೇಟ್ ಸೇದುತ್ತಿದ್ದನ್ನು (smoking) ಪ್ರಶ್ನೆ ಮಾಡಿದಕ್ಕೆ ರೊಚ್ಚಿಗೆದ್ದ ಯುವಕನೊಬ್ಬ ಕಂದಾಯ ನಿರೀಕ್ಷಕ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದ ಜನ ತಡೆಯುತ್ತಿದ್ದರೂ ನಿರಂತರವಾಗಿ ಹಲ್ಲೆ (attack) ನಡೆಸಿದ ಯುವಕ (youth). ತಪ್ಪಿಸಿಕೊಳ್ಳಲು ಹರಸಾಹ ಪಟ್ಟ ಅಧಿಕಾರಿ. ಕಿವಿಯಲ್ಲಿ ಕೇಳಲಾಗದಂತಹ ಅಶ್ಲೀಲ ಪದಗಳ ಸುರಿಮಳೆ. ಇಂತಹ ಘಟನೆ ನಡೆದಿರೋದು ಮೈಸೂರಿನ ಬಸವನಗುಡಿ ಬಡಾವಣೆಯಲ್ಲಿರುವ ಮೈಸೂರು (Mysore) ಮಹಾನಗರ ಪಾಲಿಕೆಯ ವಲಯ ಕಚೇರಿ 5 ರಲ್ಲಿ.

ಈ ರೀತಿ ಹಲ್ಲೆ ಮಾಡಿದವನು ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಧನುಷ್. ಹಲ್ಲೆಗೊಳಗಾದವರು ಕಂದಾಯ ನಿರೀಕ್ಷಕರಾದ ನಂದಕುಮಾರ್. ಅಷ್ಟಕ್ಕೂ ನಂದಕುಮಾರ್ ಮೇಲೆ ಧನುಷ್ ಹಲ್ಲೆ ನಡೆಸಲು ಕಾರಣ ಏನು ಅಂತಾ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ.

ಹೌದು ಆರೋಪಿ ಧನುಷ್ ವಲಯ‌ ಕಚೇರಿ 5 ರ ಆವರಣದಲ್ಲಿ ಸಿಗರೇಟ್ ಸೇದುತ್ತಿದ್ದ. ಅದನ್ನು ಗಮನಿಸಿದ ನಂದಕುಮಾರ್ ಸರ್ಕಾರಿ ಕಚೇರಿ ಆವರಣದಲ್ಲಿ ಸಿಗರೇಟ್ ಸೇದದಂತೆ ತಿಳಿವಳಿಕೆ ಹೇಳಿದ್ದಾನೆ. ಅಷ್ಟಕ್ಕೇ ರೊಚ್ಚಿಗೆದ್ದ ಧನುಷ್ ಕಚೇರಿ ಒಳಗೆ ನುಗ್ಗಿ ನಂದಕುಮಾರ್‌ರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಗೆ ಬಾ ನೋಡಿಕೊಳ್ಳುತ್ತೇನೆ ಅಂತಾ ಧಮ್ಕಿ ಹಾಕಿದ್ದಾನೆ. ಈ ಸಂಬಂಧ ಪಾಲಿಕೆ ಸಿಬ್ಬಂದಿಗಳು ಪಾಲಿಕೆ ಆಯುಕ್ತ ಅಸಾದ್ ಉರ್ ರಹಮಾನ್ ಷರೀಫ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

Also Read: ವರ್ಕ್ ಫ್ರಂ ಹೋಮ್ ಕಡಿಮೆ ಆಗುತ್ತಿದ್ದಂತೆಯೇ ಭಾರತದಲ್ಲಿ ಸಿಗರೇಟ್ ಮಾರಾಟ ಹೆಚ್ಚಳ

ಈ ಸಂಬಂಧ ಹೀಗಾಗಲೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಧನುಷ್ ತಲೆ ಮರೆಸಿಕೊಂಡಿದ್ದಾನೆ. ಆತನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತ ಸಿಬ್ಬಂದಿ ವಿಚಲಿತರಾಗದಂತೆ ಆಯುಕ್ತರು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಎಲ್ಲರಿಗೂ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ಸಿಗರೇಟ್ ಸೇದ ಬೇಡ ಅಂದಿದ್ದೇ ಮಹಾ ಅಪರಾಧ ಎಂಬಂತೆ ಹಲ್ಲೆ ನಡೆಸಿದ ಧನುಷ್‌ ವಿರುದ್ಧ ಕಾನೂನು ರೀತಿ ಕ್ರಮ ಆಗಬೇಕಿದೆ. ಆಗ ಮಾತ್ರ ಇಂತಹ ಘಟನೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ