ಮೈಸೂರು, ಸೆಪ್ಟೆಂಬರ್ 27: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರ (Mysore Dasara 2024) ಟಿಕೆಟ್ ಮಾರಾಟ ಶನಿವಾರದಿಂದ (ಸೆ.28) ಆರಂಭವಾಗಲಿದೆ. ಎರಡು ರೀತಿಯ ಟಿಕೆಟ್ಗಳಿವೆ. ಗೋಲ್ಡ್ ಕಾರ್ಡ್ (Gold Card) ಮತ್ತು ಸಾಮಾನ್ಯ ಟಿಕೆಟ್. ಈ ಎರಡವುಗಳನ್ನು ಆನ್ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ. ಸೆಪ್ಟೆಂಬರ್ 30ರವರೆಗೆ ಮಾತ್ರ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು.
ದಸರಾ ಮತ್ತು ಯುವ ದಸರಾಗೆ ಟಿಕೆಟ್ ಮಾರಾಟ ಸೆ.28ರಿಂದ ಆರಂಭವಾಗಲಿದೆ. ಪ್ರತಿನಿತ್ಯ 1 ಸಾವಿರದಿಂದ 1500 ಗೋಲ್ಡ್ ಕಾರ್ಡ್ಗಳನ್ನು ಮರಾಟ ಮಾಡಲಾಗುತ್ತದೆ. ಒಂದು ದಸರಾ ಗೋಲ್ಡ್ ಕಾರ್ಡ್ಗೆ 6,500 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 3,500 ರೂ. ಬೆಲೆಯ ಟಿಕೆಟ್ ಲಭ್ಯವಿದೆ. ಇನ್ನು, ಕೇವಲ ಪಂಜಿನ ಕವಾಯತು ವೀಕ್ಷಣೆಗೆ 1,000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ ಗಜಪಡೆ, ಅಶ್ವಾರೋಹಿ ಪಡೆಗೆ ಸಿಡಿಮದ್ದು ತಾಲೀಮು: ಬೆದರಿದ ಹೊಸ ಆನೆಗಳು, ಚದುರಿದ ಕುದುರೆಗಳು!
ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಿದೆ. ಬೆಳಗ್ಗೆ 7.30ಕ್ಕೆ ನವಗ್ರಹ ಹೋಮ ಶಾಂತಿ ಪೂಜೆ ಮೂಲಕ ಸಿಂಹಾಸನ ಜೋಡಣಾ ಕಾರ್ಯ ಶುರುವಾಯಿತು. ಅರಮನೆ ದರ್ಬಾರ್ ಹಾಲ್ನಲ್ಲಿ ಬೆಳಗ್ಗೆ 9.55 ರಿಂದ 10.25ರೊಳಗೆ ರತ್ನಖಚಿತ ಸಿಂಹಾಸನ ಜೋಡಿಸಲಾಗಿದೆ. ಅಕ್ಟೋಬರ್ 3ರಿಂದ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಅರಮನೆ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Fri, 27 September 24