ಮೈಸೂರು ದಸರಾದಲ್ಲೂ ಭ್ರಷ್ಟಾಚಾರದ ಘಾಟು; ಸರೋದ್​ ವಾದಕ ಪಂ. ರಾಜೀವ್​ ತಾರಾನಾಥರ ಬಳಿ ಕಮಿಷನ್ ಕೇಳಿದ ಅಧಿಕಾರಿಗಳು

| Updated By: ವಿವೇಕ ಬಿರಾದಾರ

Updated on: Oct 14, 2023 | 3:02 PM

ನಾಡಹಬ್ಬ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತೀಯ ಸರೋದ್​ ವಾದಕ ಪಂ. ರಾಜೀವ ತಾರಾನಾಥ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು ಸಂಭಾವನೆಯಲ್ಲಿ ಕಮಿಷನ್​ಗೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ.

ಮೈಸೂರು ದಸರಾದಲ್ಲೂ ಭ್ರಷ್ಟಾಚಾರದ ಘಾಟು; ಸರೋದ್​ ವಾದಕ ಪಂ. ರಾಜೀವ್​ ತಾರಾನಾಥರ ಬಳಿ ಕಮಿಷನ್ ಕೇಳಿದ ಅಧಿಕಾರಿಗಳು
ಸರೋದ್​ ವಾದಕ ಪಂ. ರಾಜೀವ ತಾರಾನಾಥ
Follow us on

ಮೈಸೂರು ಅ.14: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಮೇಲೆ ರಾಜ್ಯ ಕಾಂಗ್ರೆಸ್​ (Congress) ನಾಯಕರು 40 ಪರ್ಸಂಟೆಜ್ (40 Percentage) ಕಮಿಷನ್​​​​ ಆರೋಪ ಮಾಡಿದ್ದರು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ 40% ಕಮಿಷನ್​ ಕೇಳಲಾಗುತ್ತಿದೆ ಎಂದು ಕೈ ನಾಯಕರು ಆರೋಪಿಸಿದ್ದರು. ಪೇಸಿಎಂ ಅಂತ ಪೋಸ್ಟರ್​​ ಬಿಡುಗಡೆ ಮಾಡಿದ್ದರು. ಇದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basaravaraj Bommai) ಸರ್ಕಾರಕ್ಕೆ ಮುಜುಗರಕ್ಕೆ ತಂದೊಡ್ಡಿತ್ತು. ಇದೀಗ ಕಾಂಗ್ರೆಸ್​​ ಸರ್ಕಾರದ ಆಡಳಿತದಲ್ಲೂ ಕಮೀಷನ್​ ಆರೋಪ ಕೇಳಿಬಂದಿದೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತವರು ಕ್ಷೇತ್ರ ಮೈಸೂರಿನಲ್ಲಿ ಅಧಿಕಾರಿಗಳು ಕಮಿಷನ್​​ಗೆ ಕೈವೊಡ್ಡಿರುವ ಆರೋಪ ಕೇಳಿಬಂದಿದ್ದು, ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysore Dasara) ಕಪ್ಪು ಚುಕ್ಕೆ ಅಂಟಿದೆ.

ನಾಡಹಬ್ಬ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತೀಯ ಸರೋದ್​ ವಾದಕ ಪಂ. ರಾಜೀವ ತಾರಾನಾಥ (Rajeev Taranath) ಅವರನ್ನು ಆಹ್ವಾನಿಸಲಾಗಿತ್ತು. ದಸರಾ ಅರಮನೆ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನ ನೀಡಿದ ಅಧಿಕಾರಿಗಳು “ಕಮಿಷನ್​​”ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಾರ್ಯಕ್ರಮ ನಿಗದಿಪಡಿಸಿ ಸಂಭಾವನೆಯನ್ನೂ ಗೊತ್ತು ಮಾಡಲಾಗಿತ್ತು. ಬಳಿಕ ಅಧಿಕಾರಿಗಳು ತಾರಾನಾಥ ಅವರನ್ನು ಸಂಪರ್ಕಿಸಿ “ನಿಮ್ಮ ಸಂಭಾವನೆಗಿಂತ ಮೂರು ಲಕ್ಷ ರೂ. ಹೆಚ್ಚು ಕೊಡುತ್ತೇವೆ” ಹೆಚ್ಚುವರಿಯಾಗಿ ಜಮೆಯಾಗಿರುವ 3 ಲಕ್ಷ ರೂ. ಹಣವನ್ನು ನಮಗೆ ವಾಪಸ್ ನೀಡಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ KSRTCಯಿಂದ ವಿಶೇಷ ಪ್ಯಾಕೇಜ್​; ಇಲ್ಲಿ ಡೀಟೈಲ್ಸ್​​​

ಇದಕ್ಕೆ ಪಂಡಿತ್ ರಾಜೀವ್ ತಾರಾನಾಥ್ ಅವರು ನಿರಾಕರಿಸಿದ್ದಾರೆ. ಇದರಿಂದ ಅವರನ್ನು ದಸರಾ ಕಾರ್ಯಕ್ರಮದಿಂದ ಕೈಬಿಡಾಲಾಗಿದೆ ಎಂಬ ಮಾಹಿತಿ ಟಿವಿ9 ಡಿಜಿಟಲ್​​ಗೆ ಲಭ್ಯವಾಗಿದೆ. ಈ ಆರೋಪದ ಬಗ್ಗೆ ಮಾಹಿತಿ ಪಡೆಯಲು ಮೈಸೂರು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಪಂಡಿತ್ ತಾರಾನಾಥ್ ಅವರ ಬಳಿ ಕಳುಹಿಸಿದ್ದಾರೆ. ತಪ್ಪಿತಸ್ಥರ ಮೇಲೆ ತಕ್ಷಣ ಎಫ್​​ಐಆರ್ ದಾಖಲು ಮಾಡುವಂತೆ ಮೌಖಿಕ ಸೂಚನೆ ನೀಡಿದ್ದಾರೆ.

ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ: ಹೆಚ್​​ಸಿ ಮಹದೇವಪ್ಪ

ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಯಾರೇ ಮಾಡಿದ್ದರು ಅವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ. ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ

ಜಿಲ್ಲಾ ಪಂಚಾಯತ್​ ಸಿಇಓ ಗಾಯತ್ರಿ ಸ್ಪಷ್ಟನೆ

ಪಂಡಿತ್ ತಾರಾನಾಥ್ ಅವರನ್ನು ಸಂಪರ್ಕಿಸಿದ್ದೇವೆ. ಮಾತುಕತೆ ನಡೆಸಿದ್ದೇವೆ. ಯಾವುದೇ ಅಧಿಕಾರಿಗಳಗಲಿ ಸಾಂಸ್ಕೃತಿಕ ಉಪ ಸಮಿತಿಯ ಸದಸ್ಯರಾಗಲಿ ನನ್ನನ್ನು ಸಂಪರ್ಕ ಮಾಡಿಲ್ಲ ಎಂದಿದ್ದಾರೆ. ಯಾವುದೊ ಅನಾಮಧೇಯ ವ್ಯಕ್ತಿಯಿಂದ ಇನ್ನೊಬ್ಬರ ಮೊಬೈಲ್​ಗೆ ಈ ರೀತಿಯ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ. ಅನಾಮದೇಯ ವ್ಯಕ್ತಿಯ ನಂಬರ್ ಸಹ ಸಿಕ್ಕಿಲ್ಲ ಎಂದಿದ್ದಾರೆ. ತಾರಾನಾಥ್ ಅವರಿಗೆ ಯಾರು ಕರೆ ಮಾಡಿದ್ದರೋ ಆ ಅನಾಮಧೇಯ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಜಿಲ್ಲಾ ಪಂಚಾಯತ್​ ಸಿಇಓ ಗಾಯತ್ರಿ ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:53 am, Sat, 14 October 23