ಮೈಸೂರು: 14 ಬಾರಿ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮ ಅಸ್ವಸ್ಥ

|

Updated on: May 07, 2023 | 9:52 AM

ದಸರಾ ಅಂದರೆ ಥಟ್ಟನೆ ನೆನಪಾಗುವುದು ವಿಶ್ವವಿಖ್ಯಾತ ಜಂಬೂಸವಾರಿಯ ಗಜಪಡೆ. ಹೌದು ನಾಡ‌ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಸಾಗುತ್ತಿದ್ದ ಬಲರಾಮ ಇದೀಗ ಅಸ್ವಸ್ಥನಾಗಿದ್ದಾನೆ.

ಮೈಸೂರು: 14 ಬಾರಿ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮ ಅಸ್ವಸ್ಥ
ದಸರಾ ಆನೆ ಬಲರಾಮ ಅಸ್ವಸ್ಥ
Follow us on

ಮೈಸೂರು: ದಸರಾ(Dasara) ಅಂದರೆ ಥಟ್ಟನೆ ನೆನಪಾಗುವುದು ವಿಶ್ವವಿಖ್ಯಾತ ಜಂಬೂಸವಾರಿಯ ಗಜಪಡೆ. ನಾಡ‌ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತು ರಾಜಬೀದಿಗಳಲ್ಲಿ ಸಾಗುವ ಗಜಪಡೆಯ ಗಜಗಾಂಭೀರ್ಯ ನಡಿಗೆಯನ್ನು ಕಣ್ಣು ತುಂಬಿಕೊಳ್ಳುವುದೇ ರೋಚಕ. ಈ ಮಹತ್ತರ ಜವಾಬ್ದಾರಿಯನ್ನು ಹಲವು ಆನೆಗಳು ಯಶಸ್ವಿಯಾಗಿ ನಿರ್ವಹಿಸಿವೆ. ಅದರಲ್ಲಿ ಪ್ರಮುಖವಾದ ಆನೆ ಬಲರಾಮ. ಸೌಮ್ಯ ಸ್ವಭಾವದ ಬಲರಾಮ ಆನೆ ಒಂದಲ್ಲ ಎರಡಲ್ಲ ಬರೋಬ್ಬರಿ 14 ಬಾರಿ ಅಂಬಾರಿ ಹೊತ್ತಿದ್ದಾನೆ. ದಸರಾದ ಅತ್ಯಂತ ಯಶಸ್ವಿಯಾಗಿ ಜಂಬೂಸವಾರಿ ಜವಾಬ್ದಾರಿ ನಿರ್ವಹಿಸಿದ ಬಲರಾಮ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ.

ಬಲರಾಮನಿಗೆ ಚಿಕಿತ್ಸೆ ನೀಡುತ್ತಿರುವ ಪಶು ವೈದ್ಯರ ತಂಡ

ಬಲರಾಮ ತೀವ್ರ ಅಸ್ವಸ್ಥಗೊಂಡಿದ್ದಾನೆ. 67 ವರ್ಷದ ಬಲರಾಮನಿಗೆ ವಯೋಸಹಜ ಆರೋಗ್ಯ ಸಮಸ್ಯೆ ಕಾಡುತ್ತಿದೆ. ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ನ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಿದೆ. ಬಲರಾಮನಿಗೆ ಕಳೆದ ಹತ್ತು ದಿನಗಳಿಂದ ಬಾಯಲ್ಲಿ ಹುಣ್ಣಾಗಿದೆ. ಇದರಿಂದ ಆಹಾರ ಸೇವಿಸಲು ಸಾಧ್ಯವಾಗದೆ ನಿತ್ರಾಣಗೊಂಡಿದ್ದಾನೆ. ಇದು ಟಿಬಿ(ಕ್ಷಯ) ಇರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿ ಬಂದ ನಂತರವಷ್ಟೆ ಇದರ ಕುರಿತು ನಿಖರವಾಗಿ ತಿಳಿಯಲಿದೆ.

ಇದನ್ನೂ ಓದಿ:Nanjangud: ವಿಷಕಂಠನ ಸನ್ನಿಧಿಯಲ್ಲಿ ಪ್ರಧಾನಿ ಮೋದಿ; ಮೈಸೂರು ಚಾಮರಾಜನಗರ ಮಾರ್ಗದಲ್ಲಿ ಸಂಚಾರ ಬದಲಾವಣೆ

ಸ್ಥಳದಲ್ಲೇ ಬೀಡು ಬಿಟ್ಟಿರುವ ತಜ್ಞರು

ಬಲರಾಮನಿಗೆ ಆಹಾರ ಸೇವಿಸಲು ಮಾತ್ರವಲ್ಲ ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿದೆ. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಾಗರಹೊಳೆ ಅಭಯಾರಣ್ಯದ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ರತ್ನಾಕರ್, ಡಿಆರ್‌ಎಫ್‌ಓ ಸಿದ್ದರಾಜು ನೇತೃತ್ವದ ತಂಡ ಜೊತೆಗೆ ಬಲರಾಮನ ಮಾವುತ ತಿಮ್ಮ, ಕಾವಾಡಿ ಮಂಜನಾಥ, ಇನ್ನಿತರ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಅಸ್ವಸ್ಥಗೊಂಡಿರುವ ಬಲರಾಮನ ಆರೈಕೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಎಂಡೋಸ್ಕೋಪಿ ವರದಿ

ತೀವ್ರ ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಪಶು ವೈದ್ಯ ಡಾ.ಚೆಟ್ಟಿಯಪ್ಪ, ಡಾ.ಮದನ್, ಡಾ.ರಮೇಶ್ ತಂಡ ಬಲರಾಮನನ್ನು ವಿವಿಧ ಪರೀಕ್ಷೆಗೆ ವಳಪಡಿಸಿದ್ದಾರೆ. ಮೈಸೂರು ಅರಮನೆ ರಾಜ ಕುಟುಂಬದ ನೆರವಿನಿಂದ ಪೋರ್ಟಬಲ್ ಯಂತ್ರದ ಮೂಲಕ ಎಂಡೋಸ್ಕೋಪಿ ಸಹ ಮಾಡಲಾಗಿದೆ. ಇದೆ ವರದಿಗಾಗಿ ಕಾಯಲಾಗುತ್ತಿದ್ದು, ಇದರ ವರದಿ ಬಂದ ನಂತರ ಬಲರಾಮನಿಗೆ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ.

ರಾಗಿ ಗಂಜಿ, ಬಾಳೆ ಹಣ್ಣು

ಬಲರಾಮ ಕಳೆದ ಹತ್ತು ದಿನಗಳಿಂದ ತೀವ್ರ ಅಸ್ವಸ್ಥಗೊಂಡಿರುವ ಬಲರಾಮನಿಗೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಗಟ್ಟಿ ಆಹಾರ ಸೇವಿಸಲಾಗದ ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರ ನೀಡಲಾಗುತ್ತಿದೆ.

ಇದನ್ನೂ ಓದಿ:Ramanagara Accident: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಸರಣಿ ಅಪಘಾತ; ಮೂವರು ಸ್ಪಾಟ್ ಡೆತ್

ಹಾರೈಕೆಗಳ ಮಹಾಪೂರ

ಮೈಸೂರು ದಸರೆಯ ಅಸ್ಮಿತೆ. ಎಲ್ಲರ ಪ್ರೀತಿ ಪಾತ್ರ ಬಲರಾಮ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅನ್ನೋದು ಎಲ್ಲರ ಆಶಯವಾಗಿದೆ. ಮೈಸೂರು ಮಾತ್ರವಲ್ಲ ಜಗತ್ತಿನ ಹಲವರು ಬಲರಾಮನ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುತ್ತಿದ್ದಾರೆ. ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಬಲರಾಮ ಆದಷ್ಟು ಬೇಗ ಗುಣಮುಖವಾಗಲಿ ಅನ್ನೋದೆ ನಮ್ಮ ಹಾರೈಕೆ.

ವರದಿ: ರಾಮ್ ಟಿವಿ9 ಮೈಸೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:51 am, Sun, 7 May 23