Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೋರಂಜನ್ ಪೋಷಕರ ಸುದೀರ್ಘ ವಿಚಾರಣೆ: ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದ ದೆಹಲಿ ಪೊಲೀಸ್​

ಸಂಸದ ಪ್ರತಾಪ್ ಸಿಂಹರಿಂದ ಪಾಸ್ ಪಡೆದು ಲೋಕಸಭೆಗೆ ನುಗ್ಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಬಿ, ದೆಹಲಿ ಪೊಲೀಸರಿಂದ ಮನೋರಂಜನ್ ಪೋಷಕರ ವಿಚಾರಣೆ ಮಾಡಲಾಗಿದೆ. ಬೆಳಗ್ಗೆ 11.30ಕ್ಕೆ ಮನೋರಂಜನ್ ಮನೆಗೆ ಬಂದಿದ್ದ ಪೊಲೀಸರು ಭಾಷಾಂತರಕಾರರ ಜೊತೆ ಆಗಮಿಸಿ ಮನೋರಂಜನ್ ತಂದೆ-ತಾಯಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ.

ಮನೋರಂಜನ್ ಪೋಷಕರ ಸುದೀರ್ಘ ವಿಚಾರಣೆ: ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದ ದೆಹಲಿ ಪೊಲೀಸ್​
ಮನೋರಂಜನ್ ಪೋಷಕರ ವಿಚಾರಣೆ
Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2023 | 10:01 PM

ಮೈಸೂರು, ಡಿಸೆಂಬರ್​​​ 18: ದೆಹಲಿ ಸಂಸತ್ ಭವನ ದಾಳಿ (Parliment security breach) ಯಲ್ಲಿ ಭಾಗಿಯಾಗಿದ್ದ ಮೈಸೂರಿನ ಮನೋರಂಜನ್ ನಿವಾಸದಲ್ಲಿ ಡೆಲ್ಲಿ ಪೊಲೀಸರು ಇಂದು ತಲಾಶ್ ಮಾಡಿದ್ದಾರೆ. ಬೆಳಿಗ್ಗೆಯೆ ಮನೆ ಹೊಕ್ಕ ಪೊಲೀಸರ ತಂಡ ಮನೆಯಲ್ಲಿ ಇಂಚಿಚ್ಚು ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಭಾಷಾಂತರಕಾರರ ಜೊತೆ ಆಗಮಿಸಿ ವಿಚಾರಣೆ ನಡೆಸಿದ್ದ ಪೊಲೀಸರು ಮನೋರಂಜನ್ ತಂದೆ ದೇವರಾಜೇಗೌಡ, ತಾಯಿ ಶೈಲಜಾ ಪ್ರತ್ಯೇಕ ವಿಚಾರಣೆ ಮಾಡಿದ್ದಾರೆ.

ದೆಹಲಿಯ ಸಂಸತ್ ಭವನದ ಕಲಾಪದ ವೇಳೆ ಸ್ಮೋಕ್ ಬಾಂಬ್ ಹಾಕಿದ್ದ ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಮನೋರಂಜನ್ ನಿವಾಸಕ್ಕೆ ಬೆಳಿಗ್ಗೆ ದೆಹಲಿಯ ಸ್ಟ್ರೀಟ್ ಪೊಲೀಸ್ ಠಾಣೆಯ ಪೊಲೀಸರು ಎಂಟ್ರಿ ಕೊಟ್ಟಿದ್ದರು. ಓರ್ವ ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡ ಮನೋರಂಜನ್ ನಿವಾಸದಲ್ಲಿ ಮುಂಜಾನೆಯಿಂದಲೇ ಸರ್ಚಿಂಗ್ ಮಾಡಿದ್ದರು.

ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಸಂಕಷ್ಟಕ್ಕೀಡಾದ ಮನೋರಂಜನ್ ಕುಟುಂಬಸ್ಥರು, ಮೈಸೂರು ಬಿಟ್ಟು ತೆರಳದಂತೆ ಸೂಚನೆ

ಮನೆಯಿಂದ ಹೊರಗೆ ಹೋಗಿದ್ದ ಮನೋರಂಜನ್ ತಂದೆ ದೇವರಾಜೇಗೌಡ ಮಧ್ಯಾಹ್ನದ ಬಳಿಮ ಮನೆಗೆ ಬಂದಿದ್ದಾರೆ. ಈ ಮೊದಲೇ ಮನೋರಂಜನ್ ರೂಂ ಸೀಜ್ ಮಾಡಿದ್ದ ಪೊಲೀಸರು ಕೊಠಡಿ ತೆರೆದು ಇಂಚಿಂಚು ಪರಿಶೀಲನೆ ಮಾಡಿದ್ದಾರೆ.

ಮನೋರಂಜನ್ ಪೋಷಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು, ತಂದೆ-ತಾಯಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದರು. ಸಾಗರ್ ಶರ್ಮ ನಿಮಗೆ ಪರಿಚಯ ಇದ್ದಾನಾ? ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮ ಬಂದಿದ್ದ? ಸಾಗರ್ ಒಬ್ಬನೇ ಬಂದಿದ್ನಾ, ನಿಮ್ಮ ಮಗ ಇಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ್ದ? ಕೆಲಸ ಮಾಡದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತ್ತಿತ್ತು?

ಇದನ್ನೂ ಓದಿ: ಲೋಕಸಭೆ ಭದ್ರತಾ ಲೋಪ: ಮನೋರಂಜನ್ ಮನೆಗೆ 2 ಬಾರಿ ಬಂದಿದ್ದ ಸಾಗರ್ ಶರ್ಮಾ

ಮನೆಯಲ್ಲಿ ಯಾವ ರೀತಿ ಇರ್ತಾ ಇದ್ದ, ಅವನ ಹವ್ಯಾಸ ಏನು,‌ ಯಾರ ಜೊತೆಯಲ್ಲಾದರೂ ಸಂಪರ್ಕ ಇತ್ತಾ ಅಂತಾ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಜೊತೆ ಮನೋರಂಜನ್ ದೆಹಲಿಯ ವಿಚಾರಣೆ ಬಾಯ್ಬಿಟ್ಟಿದ್ದ ಉತ್ತರಗಳು ಹಾಗೂ ಪೋಷಕರು ಕೊಟ್ಟ ಉತ್ತರ ಮ್ಯಾಚ್ ಆಗ್ತಾ ಇದಿಯಾ ಅಂತ ಕೂಡ ಪರಿಶೀಲಿಸಿದ್ದಾರೆ.

ಒಂದಷ್ಟು ಮಹತ್ವದ ಮಾಹಿತಿಯನ್ನ ಸಂಗ್ರಹಿಸಿರುವ ಪೊಲೀಸರು ಮನೋರಂಜನ್ ರೂಂನಲ್ಲಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪುತ್ರನ ಕಿತಾಪತಿಗೆ ಮನೋರಂಜನ್ ಪೋಷಕರು ಪೊಲೀಸ್ ವಿಚಾರಣೆಗೆ ದಂಗಾಗಿ ಹೋಗಿದ್ದಾರೆ. ಮನೋರಂಜನ್​ ಈ ಕೃತ್ಯವನ್ನ ಎಸಗಿದ್ದಾದರೂ ಯಾಕೆ ಅನ್ನೋದು ಇಂದಿಗೂ ನಿಗೂಢವಾಗಿದ್ದು ಪೊಲೀಸರ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.