ಮೈಸೂರು, ಸೆ.13: ಬಾಲ್ಯ ವಿವಾಹವನ್ನು(Child Marriage) ತಡೆಯಬೇಕಿದ್ದವರೇ ಬಾಲ್ಯ ವಿವಾಹವಾಗುತ್ತಿದ್ದಾರೆ. ಹೌದು ಅಪ್ರಾಪ್ತೆಯ ಜೊತೆ ಗ್ರಾ.ಪಂ ಉಪಾಧ್ಯಕ್ಷ ಮದುವೆ(Marriage) ಮಾಡಿಕೊಂಡಿದ್ದು ಗ್ರಾಮಸ್ಥರೇ ದಾಖಲೆ ಸಮೇತ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ(Women and Child Welfare Department) ದೂರು ಸಲ್ಲಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಂಜನಗೂಡು ತಾಲೂಕಿನ ಅರಿಯೂರು ಗ್ರಾಮಸ್ಥರು ದಾಖಲೆ ಸಮೇತ ದೂರು ನೀಡಿದ್ದು ಅಪ್ರಾಪ್ತೆ ಮದುವೆಯಾಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರತದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಈಗಲೂ ಅನೇಕ ಕಡೆ ಕದ್ದುಮುಚ್ಚಿ ಬಾಲ್ಯ ವಿವಾಹವನ್ನು ಮಾಡಲಾಗುತ್ತಿದೆ. ಆದರೆ ಮೈಸೂರಿನಲ್ಲಿ ಬಾಲ್ಯ ವಿವಾಹದ ವಿರುದ್ಧ ಹೋರಾಡಬೇಕಿದ್ದವರೇ ಬಾಲ್ಯ ವಿವಾಹವಾಗುತ್ತಿರುವುದು ಬೆಳಕಿಗೆ ಬಂದಿದೆ. ಹಾಡ್ಯ ಗ್ರಾ.ಪಂ ಉಪಾಧ್ಯಕ್ಷ ಹರೀಶ್ ಕುಮಾರ್ ಎಂಬುವವರು ಬಾಲಕಿಯ ಆಧಾರ್ ತಿದ್ದುಪಡಿ ಮಾಡಿಸಿ ಅಪ್ರಾಪ್ತೆಯನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂಜನಗೂಡಿನ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ವಿವಾಹವಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಗ್ರಾ.ಪಂ ಉಪಾಧ್ಯಕ್ಷ ಹರೀಶ್ 2023ರ ಫೆಬ್ರವರಿ 15ರಂದು ನಂಜನಗೂಡಿನ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯಾಗಿದ್ದಾರೆ. ಶಾಲಾ ದಾಖಲಾತಿ ಪ್ರಕಾರ ಅಪ್ರಾಪ್ತೆಗೆ ಇನ್ನೂ 18 ವರ್ಷ ತುಂಬಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರಿನ ಚಕ್ರಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಕಳ್ಳರನ್ನು ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮೂಲದ ಸಿದ್ದಿಕ್ (24), ಶಾರುಖ್ ಖಾನ್ (25), ಮೈಸೂರಿನ ಕೆಸರೆಯ ಸಕ್ಲೈನ್ ಮುಷ್ತಾಕ್ (24) ಬಂಧಿತ ಆರೋಪಿಗಳು. ಇನ್ನು ಆರೋಪಿಗಳಿಂದ ಕಳವು ಮಾಡಿದ್ದ 2.56 ಲಕ್ಷ ರೂಪಾಯಿ ಮೌಲ್ಯದ ಮೂರು ಕಾರುಗಳ 12 ಚಕ್ರಗಳು, 80 ಸಾವಿರ ರೂಪಾಯಿ ಮೌಲ್ಯದ ಎರಡು ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿದ್ದ 1.5 ಲಕ್ಷ ರೂಪಾಯಿ ಮೌಲ್ಯದ ಒಂದು ಮಾರುತಿ ಕಾರು ಹಾಗೂ 40 ಸಾವಿರ ಮೌಲ್ಯದ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮಾಂಸ ಬೇಕೆಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ತೊಡೆ ಮಾಂಸ ಕಿರಿಕ್
ಬೆಳಗಾವಿಯಿಂದ ಮೈಸೂರಿಗೆ ಬಂದಿದ್ದ ಶಿವರಾಜ್ ಮಹಾಲಿಂಗ್ ಮೇಲುಮಟ್ಟಿ ಎಂಬ 14 ವರ್ಷದ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಆಟೋ ಚಾಲಕ ಹರೀಶ್ ಕುಮಾರ್ ಅವರ ಸಮಯ ಪ್ರಜ್ಞೆಯಿಂದ ಬಾಲಕನ ರಕ್ಷಣೆ ಮಾಡಲಾಗಿದೆ. ಟ್ಯೂಷನ್‌ಗೆ ಅಂತಾ ಹೋಗಿದ್ದ ಬಾಲಕ ಶಿವರಾಜ್ ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ. ಈ ಬಗ್ಗೆ ಮರಡಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಆದರೆ ಶಿವರಾಜ್ ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದ. ಇದನ್ನು ಗಮನಿಸಿದ ಆಟೋ ಚಾಲಕ ಹರೀಶ್ ಅವರು ಬಾಲಕನನ್ನು ಮಾತನಾಡಿಸಿ ದೇವರಾಜ ಪೊಲೀಸ್ ಠಾಣೆಗೆ ಕರೆ ತಂದಿದ್ದು ಮೈಸೂರು ಪೊಲೀಸರು ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ