ಮೈಸೂರು, ಜನವರಿ 17: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿ ಒಂದು ವರ್ಷವಾಯಿತು. ಮೈಸೂರು (Mysore) ತಾಲೂಕು ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದ ರಾಮ್‌ದಾಸ್ ಎಂಬುವರ ಜಮೀನಲ್ಲಿ ದೊರೆತ ಕೃಷ್ಣ ಕಲ್ಲಿನಿಂದ ಬಾಲರಾಮನ ಮೂರ್ತಿಗೆ ಕೆತ್ತಲಾಗಿದೆ. ಕಲ್ಲು ದೊರೆತ ಸ್ಥಳದಲ್ಲಿ ಕೂಡ ರಾಮ ಮಂದಿರ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ವರ್ಷ ಕಳೆದರೂ ದೇವಸ್ಥಾನ ನಿರ್ಮಾಣದ ಕಾರ್ಯ ಮಾತ್ರ ಆರಂಭವಾಗಿಲ್ಲ. ಭರವಸೆಕೊಟ್ಟ ರಾಜಕಾರಣಿಗಳು ಕೂಡ ಅತ್ತ ಸುಳಿದಿಲ್ಲ. ಈಗಾಗಿ ಕಲ್ಲು ಸಿಕ್ಕ ಭೂಮಿಯ ಮಾಲೀಕರೇ ರಾಮನ ಪುಟ್ಟ ಗುಡಿ ನಿರ್ಮಿಸಲು ಮುಂದಾಗಿದ್ದಾರೆ.
ಕಲ್ಲು ಸಿಕ್ಕ ಭೂಮಿಯಲ್ಲೇ ಕಳೆದ ವರ್ಷ ಜನವರಿ 22 ರಂದು ರಾಮ ಮಂದಿರ ನಿರ್ಮಿಸಲು ಭೂಮಿ ಪೂಜೆ ಮಾಡಲಾಗಿತ್ತು. ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡ ಸೇರಿ ಸ್ಥಳಿಯ ಜನಪ್ರತಿನಿಧಿಗಳು ಪೂಜೆಯಲ್ಲಿ ಪಾಲ್ಗೊಂಡು ಈ ಸ್ಥಳವನ್ನ ದಕ್ಷಿಣ ಅಯೋಧ್ಯೆ ಮಾಡುತ್ತೇವೆ ಎಂದಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಸುಳಿದಿಲ್ಲ. ಪರಿಣಾಮ ಜಮೀನಿನ ಮಾಲೀಕರೇ ಸ್ಥಳದಲ್ಲಿ ಪುಟ್ಟ ಗುಡಿ ನಿರ್ಮಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲನಿಗಿದೆ ಮೈಸೂರಿನ ಶಿಲೆ, ಶಿಲ್ಪಿಯ ಸ್ಪರ್ಶ; ರಾಮದಾಸನ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿದ್ದೇ ರೋಚಕ
ಸದ್ಯ ರಾಮ್‌ದಾಸ್ ಜಮೀನಿನಲ್ಲಿ ಕಲ್ಲು ಸಿಕ್ಕ ಸ್ಥಳದಲ್ಲಿ ಅಡಿಗಲ್ಲು ಹಾಕಿದ್ದ ಕಲ್ಲಿಗೆ ಪೂಜೆ ಮಾಡಲಾಗುತ್ತಿದ್ದೆ. ನಿತ್ಯ ಸಾಕಷ್ಟು ಜನ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಅದೇ ಕಲ್ಲಿಗೆ ಗಂಧದ ಕಡ್ಡಿ ಬೆಳಗಿ ಪೂಜೆ ಮಾಡಿದ್ದಾರೆ. ಈಗ ಕಲ್ಲು ಸಿಕ್ಕ ಜಾಗವನ್ನು ಜೆಸಿಬಿ ಮೂಲ ಸ್ವಚ್ಛ ಮಾಡಲಾಗುತ್ತಿದೆ. ಕಲ್ಲು ಮುಚ್ಚಿರುವ ಮಣ್ಣನ್ನು ತೆಗೆದು ಅಲ್ಲಿಯೇ ಭಕ್ತರಿಗೆ ಪೂಜೆ ನೆರವೇರಿಸಲು ಅವಕಾಶ ನೀಡಲಾಗಿದೆ.
ಒಟ್ಟಾರೆ ರಾಜಕಾರಣಿಗಳು ರಾಮನನ್ನು ಬಿಟ್ಟರೂ ಭೂ ಮಾಲೀಕರು ಮಾತ್ರ ರಾಮ ಕೈ ಬಿಟ್ಟಿಲ್ಲ. ಹೀಗಾಗಿ, ಇದೇ ತಿಂಗಳ 22ನೇ ತಾರೀಖು ಮತ್ತೆ ಭೂಮಿ ಪೂಜೆ ಮಾಡಿ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Fri, 17 January 25