ಅಯೋಧ್ಯೆಯ ರಾಮಲಲ್ಲನಿಗಿದೆ ಮೈಸೂರಿನ ಶಿಲೆ, ಶಿಲ್ಪಿಯ ಸ್ಪರ್ಶ; ರಾಮದಾಸನ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿದ್ದೇ ರೋಚಕ

ಕೃಷ್ಣ ಶಿಲೆ ಮೂರ್ತಿ ಕೆತ್ತನೆಗೆ ಪ್ರಾಶಸ್ತ್ಯವಾಗಿರುವ ಕಲ್ಲು. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್‌ ದಾಸ್ ಎಂಬುವರ ಜಮೀನಿನಲ್ಲಿ ಈ ಕೃಷ್ಣ ಶಿಲೆ ಕಲ್ಲು ಸಿಕ್ಕಿತ್ತು.ಅಯೋಧ್ಯೆಗೆ ಸುಮಾರು 40 ಟನ್ ತೂಕದಷ್ಟು ಕಲ್ಲು ಕಳುಹಿಸಿಕೊಡಲಾಗಿದೆ. ಕಲ್ಲನ್ನು ಕಳುಹಿಸುವಾಗ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ, ಗೌರವದಿಂದ ಕಲ್ಲನ್ನು ಕಳುಹಿಸಿಕೊಟ್ಟಿದ್ದಾರೆ.

ಅಯೋಧ್ಯೆಯ ರಾಮಲಲ್ಲನಿಗಿದೆ ಮೈಸೂರಿನ ಶಿಲೆ, ಶಿಲ್ಪಿಯ ಸ್ಪರ್ಶ; ರಾಮದಾಸನ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿದ್ದೇ ರೋಚಕ
ಕೃಷ್ಣ ಶಿಲೆ ಸಿಕ್ಕ ಜಾಗ
Follow us
| Updated By: ಆಯೇಷಾ ಬಾನು

Updated on:Dec 29, 2023 | 12:55 PM

ಮೈಸೂರು, ಡಿ.29: ದೇಶದೆಲ್ಲೆಡೆ ರಾಮ ನಾಮ ಸ್ಮರಣೆ ಜೋರಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ (Ayodhya Ram Mandir) ಜನವರಿ 22ರಂದು ಉದ್ಘಾಟನೆಯಾಗಲಿದೆ. ಇನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತನೆ ಮಾಡಿದ್ದಾರೆ ಎಂಬುವುದು ಒಂದು ವಿಶೇಷವಾದರೆ, ಮೂರ್ತಿಗೆ ಬಳಸಲಾದ ಶಿಲೆ ಕೂಡ ಮೈಸೂರಿನದ್ದೇ ಎಂಬುವುದು ಮತ್ತೊಂದು ವಿಶೇಷವಾದ ಸಂಗತಿ. ಅಯೋಧ್ಯೆಗೆ ಮೈಸೂರಿನ ಶಿಲೆ, ಹಾಗೂ ಶಿಲ್ಪಿಯ ಸ್ಪರ್ಶ ಸಿಕ್ಕಿರೋದು ಹೆಮ್ಮೆ ತಂದಿದೆ. ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಮೈಸೂರಿನ ಶಿಲೆಯನ್ನು ಬಳಸಲಾಗಿದೆ. ಶಿಲೆಯನ್ನು ಹೇಗೆ ಗುರುತಿಸಲಾಯಿತು? ಇದೇ ಶಿಲೆ ಬಳಸಬೇಕೆಂದುಗೊಂಡದ್ದು ಏಕೆ? ಎಂಬ ನಾನಾ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ರಾಮ ದಾಸನ ಜಮೀನಿನಲ್ಲಿ ಸಿಕ್ತು ಬಾಲ ರಾಮನ ಕೆತ್ತನೆಗೆ ಶಿಲೆ

ಕೃಷ್ಣ ಶಿಲೆ ಮೂರ್ತಿ ಕೆತ್ತನೆಗೆ ಪ್ರಾಶಸ್ತ್ಯವಾಗಿರುವ ಕಲ್ಲು. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್‌ ದಾಸ್ ಎಂಬುವರ ಜಮೀನಿನಲ್ಲಿ ಈ ಕೃಷ್ಣ ಶಿಲೆ ಕಲ್ಲು ಸಿಕ್ಕಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ರಾಮ್‌ ದಾಸ್ ಜಮೀನು ಗುತ್ತಿಗೆ ಪಡೆದಿದ್ದ ಗುಜ್ಜೇಗೌಡನಪುರದ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಅವರು ಸಂಪರ್ಕ ಮಾಡಿದ್ದರು. ಬಳಿಕ ಮಾನಯ್ಯ ಬಡಿಗೇರ್ ಎಂಬುವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ಅಯೋಧ್ಯೆಯ ಗುರುಗಳ ಸಮ್ಮುಖದಲ್ಲಿ ಜಮೀನಿನಲ್ಲಿ ಸಿಕ್ಕ ಕಲ್ಲನ್ನು ಮೂರ್ತಿ ಕೆತ್ತನೆಗೆ ಹಂತಿಮಗೊಳಿಸಲಾಯಿತು. ಶುಭ ಕಾರ್ಯಗಳು ಆರಂಭವಾಗುತ್ತಿದ್ದಂತೆ ಒಂದಕ್ಕೆ ಒಂದರಂತೆ ಸಮಯ, ಸಂದರ್ಭಗಳ ಜೊತೆಗೆ ಎಲ್ಲಾ ಕಾರ್ಯಗಳು ತಾನಾಗೆ ಜರುಗುತ್ತವೆ ಎಂಬ ಮಾತಿನಂತೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲ್ಲನ ಮೂರ್ತಿಗೆ ಕಲ್ಲು ಸಿಕ್ಕಿತ್ತು.

ಇದನ್ನೂ ಓದಿ: ಅಯೋಧ್ಯೆಯ ಬಾಲರಾಮ ಮೂರ್ತಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮೈಸೂರಿನ ಹಿರಿಯ ಶಿಲ್ಪಿ

ಇನ್ನು ರಾಮ್‌ ದಾಸ್ ಜಮೀನಲ್ಲಿ‌ 10 ಅಡಿ ಆಳದಲ್ಲಿ ಅಗೆದು ಶಿಲೆಯನ್ನು ತೆಗೆಯಲಾಯಿತು. ರಾಮನ ಮೂರ್ತಿಗಾಗಿ 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆಯನ್ನು ಹೊರ ತೆಗೆದು ಅಯೋಧ್ಯೆಗೆ ರವಾನಿಸಲಾಯಿತು. ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಭರತ, ಶತೃಜ್ಞ ಮೂರ್ತಿಗೂ ಇಲ್ಲಿಂದಲೇ ಶಿಲೆ ರವಾನಿಸಲಾಗಿದೆ. ಕಲ್ಲು ಕಳುಹಿಸಿ ಪ್ರಚಾರ ಮಾಡಬಾರದು ಎಂದು ಅಯೋಧ್ಯೆ ಗುರುಗಳು ಶರತ್ತು ಹಾಕ್ಕಿದ್ದಕ್ಕೆ ಕಲ್ಲು ತೆಗೆದ ನಂತರ ಮಣ್ಣು ಮುಚ್ಚಿ ಭೂಮಿ ಸಮತಟ್ಟು ಮಾಡಿ ಈ ವಿಚಾರವನ್ನು ಆಚೆ ಬಾರದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಅಯೋಧ್ಯೆ ಗುರುಗಳು ರಾಮ ಮಂದಿರಕ್ಕಾಗಿ ಕಲ್ಲಿನ ಜೊತೆಗೆ ಇಲ್ಲಿನ ಮಣ್ಣನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಯೋಧ್ಯೆಗೆ ಸುಮಾರು 40 ಟನ್ ತೂಕದಷ್ಟು ಕಲ್ಲು ಕಳುಹಿಸಿಕೊಡಲಾಗಿದೆ. ಕಲ್ಲನ್ನು ಕಳುಹಿಸುವಾಗ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ, ಗೌರವದಿಂದ ಕಲ್ಲನ್ನು ಕಳುಹಿಸಿಕೊಟ್ಟಿದ್ದಾರೆ. ಮೈಸೂರು ಜನತೆಗೆ ರಾಮಲಲ್ಲನ ಮೂರ್ತಿಯ ಸ್ಪರ್ಶದ ಅವಕಾಶ ಸಿಕ್ಕಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:13 pm, Fri, 29 December 23