ಕೋಮು ಸೂಕ್ಷ್ಮ ಉದಯಗಿರಿಯಲ್ಲಿ ಮತ್ತೊಮ್ಮೆ ಹೊತ್ತಿದ ಅಪರಾಧದ ಕಿಡಿ! ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಮೈಸೂರಿನ ಉದಯಗಿರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಚಾಕು ಇರಿತದ ಕೊಲೆಯು ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಇತ್ತೀಚೆಗೆ ಯುವಕರು ಮಚ್ಚು ಹಿಡಿದು ಓಡಾಡಿದ ಘಟನೆಗಳ ಬೆನ್ನಲ್ಲೇ ಈ ಭೀಕರ ಕೃತ್ಯ ನಡೆದಿದೆ.ಇದು ಉದಯಗಿರಿಯಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಹಿಂಸಾಚಾರದ ಕುರಿತು ಸಾರ್ವಜನಿಕ ಆತಂಕವನ್ನು ಹೆಚ್ಚಿಸಿದೆ.

ಕೋಮು ಸೂಕ್ಷ್ಮ ಉದಯಗಿರಿಯಲ್ಲಿ ಮತ್ತೊಮ್ಮೆ ಹೊತ್ತಿದ ಅಪರಾಧದ ಕಿಡಿ! ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಮೃತ ದುರ್ದೈವಿ ಶಹಬಾಜ್ (26)
Edited By:

Updated on: Jan 20, 2026 | 11:57 AM

ಮೈಸೂರು, ಜನವರಿ 20: ಉದಯಗಿರಿಯಲ್ಲಿ ಕಳೆದ ವರ್ಷ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆ ಯುವಕರು ಮಚ್ಚು, ಲಾಂಗು ಹಿಡಿದು ಓಡಾಡಿದ ವೀಡಿಯೋ ಸಹ ಭಾರಿ ಸುದ್ದಿ ಮಾಡಿತ್ತು. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಭೀಕರ ಘಟನೆ ಉದಯಗಿರಿಯಲ್ಲಿ (Udayagiri) ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನೊಬ್ಬನ ಕೊಲೆಯಾಗಿದ್ದು, ಮತ್ತೊಮ್ಮೆ ಮೈಸೂರಿನಲ್ಲಿ ಹಲ್ ಚಲ್ ಎಬ್ಬಿಸಿದೆ.

ಇತ್ತೀಚೆಗಷ್ಟೇ ಮಚ್ಚು ಹಿಡಿದು ಓಡಾಡಿದ್ದ ಯುವಕರು

ಮೈಸೂರಿನ ಅಬುಜರ್ ಮಸೀದಿ ಸಮೀಪದ ಪಾರ್ಕಿನಲ್ಲಿ ಉದಯಗಿರಿಯ ಶಕಿಬುಲ್ ರೆಹಮಾನ್ ಅಲಿಯಾಸ್ ಟಿಪ್ಪು, ಇಮ್ರಾನ್, ಆಸೀಫ್, ಅಜಾಂ, ಅಜೀಜ್ ಎಂಬವರ ನಡುವೆ ಕ್ರಿಕೆಟ್ ಆಟದ ವಿಚಾರವಾಗಿ ಮಾರಾಮಾರಿ ನಡೆದಿದ್ದು, ಲಾಂಗು ಮಚ್ಚುಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ ಘಟನೆ ಭಾನುವಾರ ನಡೆದಿತ್ತು. ಇದರ ದೃಶ್ಯಾವಳಿಗಳು ಎಲ್ಲೆಡೆ ಹರಿದಾಡಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿತ್ತು. ಈ ಭೀಕರತೆಯ ಸದ್ದು ಅಡಗುವ ಮುನ್ನವೇ ಇದೇ ಉದಯಗಿರಿಯಲ್ಲಿ ಯುವನೋರ್ವನನ್ನು ಚಾಕು ಇರಿದು ಹತ್ಯೆಮಾಡಲಾಗಿದೆ.

ಫೈನಾನ್ಸ್ ವಿಷಯಕ್ಕೆ ನಡೆದ ಕೊಲೆ

ಗೌಸಿಯಾ ನಗರ ನಿವಾಸಿ ಶಹಬಾಜ್ (26) ಮೃತ ದುರ್ದೈವಿ. ನಗರದ ಬೀಡಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಜುಬೇರ್ ಎಂಬಾತನೇ ಸ್ನೇಹಿತರೊಂದಿಗೆ ಸೇರಿ ಈ ಕೃತ್ಯ ನಡೆಸಿದ ಆರೋಪ ಕೇಳಿಬಂದಿದೆ. ಪ್ರಾಥಮಿಕವಾಗಿ ಸಿಕ್ಕ ಮಾಹಿತಿಯ ಪ್ರಕಾರ ಸಣ್ಣಪುಟ್ಟ ವಿಷಯಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಾಗಿ ಪರಿಣಮಿಸಿದೆ.

ಕೊಲೆಯಾದ ಯುವಕ ಶಹಬಾಜ್ ವೆಲ್ಡಿಂಗ್ ಶಾಪ್ ಹೊಂದಿದ್ದು, ಫೈನಾನ್ಸ್ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ತಿಳಿದುಬಂದಿದೆ. ಏರಿಯಾದಲ್ಲಿ ನಡೆಯುತ್ತಿದ್ದ ಫೈನಾನ್ಸ್ ಹಾವಳಿಗೆ ಒಳಗಾಗಿದ್ದವರಿಂದ ಪೊಲೀಸ್ ಠಾಣೆಗೆ ಶಹಬಾಸ್ ಕಂಪ್ಲೇಂಟ್ ಕೊಡಿಸಿದ್ದ. ಈ ಕಾರಣಕ್ಕಾಗಿಯೇ ನಾಲ್ಕು ತಿಂಗಳ ಹಿಂದೆ ಆರೋಪಿ ತನ್ನ ಸ್ನೇಹಿತರೊಂದಿಗೆ ಶಹಬಾಜ್ ಅಂಗಡಿ ಮುಂದೆ ಬಂದು ಗಲಾಟೆ ಮಾಡಿದ್ದ. ಇದೀಗ ಮತ್ತೊಮ್ಮೆ ನಿನ್ನೆ (ಜನವರಿ 19) ರಾತ್ರಿ 1 ಗಂಟೆ ವೇಳೆ ಅಂಗಡಿ ಮುಚ್ಚಿ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ನಡೆದಿದ್ದು, ಆರೋಪಿಗಳು ತಲೆ, ಎದೆ, ಕತ್ತು, ಹೊಟ್ಟೆಗೆ ಚುಚ್ಚಿ ಹಲ್ಲೆ ನಡೆಸಿದ್ದಾರೆ.

ಇದನ್ನೋ ಓದಿ ಮೈಸೂರಿನ ಉದಯಗಿರಿಯಲ್ಲಿ ಮತ್ತೆ ಝಳಪಿಸಿದ ಲಾಂಗ್​, ಮಚ್ಚುಗಳು: ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ

ಸ್ಥಳೀಯರು ತಕ್ಷಣ ಶಹಬಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೊಲೆ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.