ಮೈಸೂರು, ಫೆಬ್ರವರಿ 12: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಕಾರಣವಾಯ್ತಾ ವ್ಯಕ್ತಿಯೊಬ್ಬನ ಪ್ರಚೋದನಾಕಾರಿ ಹೇಳಿಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಗಲಭೆ ನಡೆಯುವ ಮುನ್ನ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ವ್ಯಕ್ತಿ ಮೈಕ್ ಹಿಡಿದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಪ್ರಚೋದನೆ ನೀಡಿದ ಮುಷ್ತಾಕ್ ಮಕ್ಬೋಲಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
“ಧರ್ಮ ರಕ್ಷಣೆಗೆ ಬದ್ಧತೆ ನಿನ್ನೆಯೂ ಇತ್ತು, ಇವತ್ತು ಇದೆ. ಎಲ್ಲರೂ ಘೋಷಣೆ ಕೂಗಿ, ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು ಮರಣದಂಡನೆ ವಿಧಿಸಬೇಕು. ನಿಮ್ಮ ಇಚ್ಛೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುವುದು. ಮೈಸೂರಿನ ಎಲ್ಲ ಮುಸ್ಲಿಂರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಈ ವಿಡಿಯೋವನ್ನು ಎಲ್ಲ ಕಡೆ ಶೇರ್ ಮಾಡಿ” ಎಂದು ಮೈಕ್ ಹಿಡಿದು ಭಾಷಣ ಮಾಡಿದ ವಿಡಿಯೋ ವೈರಲ್ ಆಗಿದೆ.
ಮುಷ್ತಾಕ್ನ ಹೇಳಿಕೆಯಿಂದ ಪ್ರಚೋದನೆಗೊಂಡು ಗಲಭೆ ನಡೆದಿದೆ ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಚೋದನೆ ನೀಡಿದ ಮುಷ್ತಾಕ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರು ಉದಯಗಿರಿ ಗಲಾಟೆ: ಅಸಲಿಗೆ ಅಲ್ಲಿ ನಡೆದಿದ್ದೇನು? ಎಡಿಜಿಪಿ ಆರ್ ಹಿತೇಂದ್ರ ಹೇಳಿದ್ದಿಷ್ಟು
ಕಲ್ಲು ತೂರಾಟ ನಡೆಸಿದ50ರಿಂದ 60 ಜನರ ಗುರುತನ್ನು ಉದಯಗಿರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಠಾಣೆಯ ಸುತ್ತಮುತ್ತ ಸಿಸಿಟಿವಿ ದೃಶ್ಯ ಆಧರಿಸಿ ವ್ಯಕ್ತಿಗಳ ಗುರುತು ಪತ್ತೆ ಹಚ್ಚಲಾಗಿದೆ. ಹಾಗೇ ಗಲಾಟೆ ವೇಳೆ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾದ ದೃಶ್ಯಗಳನ್ನು ಸಹ ಪೊಲೀಸರು ಸಂಗ್ರಹಿಸಿದ್ದಾರೆ. ಮೊಬೈಲ್ ವಿಡಿಯೋ ಮತ್ತು ಸಿಸಿ ಕ್ಯಾಮೆರಾ ಪರಿಶೀಲನೆ ಬಳಿಕ ಕಲ್ಲು ತೂರಾಟ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಬಹುತೇಕ ಸ್ಥಳೀಯರೇ ಕಲ್ಲು ತೂರಾಟ ನಡೆಸಿದ್ದಾರೆ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಇನ್ನು ಕಲ್ಲು ತೂರಾಟ ಮಾಡಿದವರ ಹೆಸರು, ವಿಳಾಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದ್ದು, ಆರೋಪಿಗಳ ವಶಕ್ಕೆ ಪಡೆಯಲು ಸಿದ್ಧತೆ ನಡೆಯುತ್ತಿದೆ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದನು. ಯುವಕ ವ್ಯಂಗ್ಯವಾಗಿ ಪೋಸ್ಟ್ ಮಾತ್ರ ಹಾಕದೆ ಒಂದು ಧರ್ಮಕ್ಕೆ ಅವಮಾನ ಮಾಡುವ ರೀತಿ ವಾಕ್ಯಗಳನ್ನು ಬರೆದಿದ್ದನು. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು.
ಯಾವಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತೋ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅಲ್ಲಿದ್ದ ಗುಂಪು ಇದನ್ನು ಕೇಳಲು ಸಿದ್ಧರಿರಲಿಲ್ಲ. ಏಕಾಏಕಿ ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Wed, 12 February 25