
ಮೈಸೂರು, (ಜನವರಿ 28): ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ (Drugs Lab)
ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB Raid) ಹಾಗೂ ಮೈಸೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಫಿನಾಯಿಲ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ. ಸದ್ಯ ಎನ್ಸಿಬಿ ಅಧಿಕಾರಿಗಳು ಲ್ಯಾಬ್ ವಶಕ್ಕೆ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಎನ್ಸಿಬಿ ಅಧಿಕಾರಿಗಳ ತಂಡ ಮಾದಕ ದ್ರವ್ಯ ಜಾಲ ಪತ್ತೆಹಚ್ಚಿದ್ದರು. ಆ ವೇಳೆ ಬಂಧಿತರ ಮಾಹಿತಿ ಮೇರೆಗೆ ಇಂದು ಮೈಸೂರಿನಲ್ಲಿ ದಾಳಿ ಮಾಡಲಾಗಿದೆ. ಫಿನಾಯಿಲ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಡಿಟರ್ಜೆಂಟ್, ಸೋಡಾ, ಉಪ್ಪು ಸೇರಿದಂತೆ ಕಚ್ಚಾವಸ್ತುಗಳು ಪತ್ತೆ ಆಗಿವೆ. ಆದರೆ, ಯಾವುದೇ ಮಾದಕ ದ್ರವ್ಯ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಎನ್ಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದ ಕಟ್ಟಡದ ಮಾಲೀಕ ಬೋರೇಗೌಡರ ಪರ ವಕೀಲ ಭರತ್ ಹೇಳಿಕೆ ನೀಡಿದ್ದು, ಇದು ಬೋರೇಗೌಡರಿಗೆ ಸೇರಿದ್ದ ಬಿಲ್ಡಿಂಗ್. ಕಳೆದ ಒಂದು ವರ್ಷದ ಹಿಂದೆ ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಬ್ರೋಕರ್ ಒಬ್ಬರಿಂದ ಗಣಪತ್ ಲಾಲ್ ಎನ್ನುವವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಇನ್ನು ವರ್ಕ್ ಶುರು ಮಾಡಿರಲಿಲ್ಲ. ಒಂದಷ್ಟು ಮಿಷನ್ ಯೂನಿಟ್ಗಳನ್ನು ಹಾಕಿರುವುದಾಗಿ ಮಾಹಿತಿ ಇದೆ. ಗುಜರಾತ್ನಲ್ಲಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಆತ ಕೊಟ್ಟ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಇತ್ತೀಚೆಗೆ ಅಂದರೆ 2025ರ ಜುಲೈನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿತ್ತು. ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ ಮೈಸೂರಿನ ಹೊರವಲಯದ ರಿಂಗ್ ರಸ್ತೆ ಬಳಿ ಎಸ್.ಎಸ್ ನಗರದಲ್ಲಿ ಎಂಡಿಎಂಎ ತಯಾರಿಕಾ ಘಟಕ ಪತ್ತೆ ಮಾಡಿದ್ದರು. ಈ ದಾಳಿ ವೇಳೆ 100 ಕೋಟಿಗೂ ಅಧಿಕ ಮೌಲ್ಯದ ಸುಮಾರು 50 ಕೆ.ಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮಹಾರಾಷ್ಟ್ರದಲ್ಲಿ ಸೆರೆಯಾಗಿದ್ದ ಡ್ರಗ್ ಪೆಡ್ಲರ್ ಮೈಸೂರಿನಲ್ಲಿನ ತಯಾರಿಕಾ ಘಟಕದ ಬಗ್ಗೆ ಬಾಯಿ ಬಿಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದರು. ಈ ವೇಳೆ ಮೈಸೂರು ಪೊಲೀಸರು ಮಹಾರಾಷ್ಟ್ರ ಪೊಲೀಸರಿಗೆ ಸಾಥ್ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:56 pm, Wed, 28 January 26