
ಮೈಸೂರು, ಜೂನ್ 19: ಈ ಬಾರಿ 11 ದಿನಗಳ ದಸರಾ (Dasara) ಆಚರಣೆ ಬಂದಿರುವುದರಿಂದ ಒಳಿತಾಗಲಿದೆಯೇ ಅಥವಾ ಕೆಡುಕಾಗಲಿದೆಯೇ ಎಂಬ ಬಗ್ಗೆ ಚಿಂತಕ ಡಾ. ಶೆಲ್ವ ಪಿಳೈ ಅಯ್ಯಂಗಾರ್ (Dr Shelvapillai Iyengar) ವಿಶ್ಲೇಷಿಸಿದ್ದಾರೆ. ‘ಟಿವಿ9’ ಜತೆ ಮಾತನಾಡಿರುವ ಅವರು, ಹನ್ನೊಂದು ದಿನ ದಸರಾ ಬಂದಿರುವುದನ್ನು ಶುಭ ಎಂದೇ ಹೇಳಬಹುದು. ಒಳಿತೇನಾದರೂ ಆಗಬಹುದು ಎಂಬುದಾಗಿ ನಿರೀಕ್ಷೆ ಮಾಡಬಹುದು ಎಂದರು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಪಂಚಾಂಗಗಳಲ್ಲಿ ಹನ್ನೊಂದು ಎಂಬುದು ಅತ್ಯಂತ ಮುಖ್ಯವಾದ ಸಂಖ್ಯೆ. ಯಾಕೆಂದರೆ ಗ್ರಹಗಳು ದುಃಸ್ಥಾನದಲ್ಲಿ, ಅಂದರೆ ಮೂರು, ಆರು, ಎಂಟು ಅಥವಾ ಹನ್ನೆರಡರಲ್ಲಿ ಇದ್ದರೆ ಶುಭ ಎಂದು ಪರಿಗಣಿಸುವುದಿಲ್ಲ. ಈ ತರ ಇದ್ದರೆ ಅವುಗಳು ಒಳಿತು ಮಾಡುವುದಿಲ್ಲ. ‘‘ಶುಭ ಏಕಾದಶ ಸ್ಥಾನ ಪಲದಾಭವಂತು’’ ಎಂದು ಹೇಳುತ್ತಾರೆ. ಅಂದರೆ, ಗ್ರಹಗಳು ಹನ್ನೊಂದನೇ ಜಾಗಕ್ಕೆ ಬಂದರೆ ಒಳಿತು ಮಾಡುತ್ತವೆ. ಅದು ಶನೈಶ್ಚರ ಆಗಿರಬಹುದು, ಮಂಗಳ ಆಗಿರಬಹುದು, ರಾಹು, ಕೇತು, ಯಾವುದೇ ಗ್ರಹಗಳಾಗಿರಬಹುದು. ಹನ್ನೊಂದನೇ ಜಾಗದಲ್ಲಿ ಇದ್ದರೆ ಒಳಿತನ್ನೇ ಮಾಡುತ್ತವೆ. ಹಿಗಾಗಿ 11 ಎಂಬುದಕ್ಕೆ ನಮ್ಮ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ಡಾ. ಶೆಲ್ವ ಪಿಳೈ ಅಯ್ಯಂಗಾರ್ ವಿಶ್ಲೇಷಿಸಿದ್ದಾರೆ.
11 ದಿನದ ದಸರಾ ಆಚರಣೆ ಶುಭಪ್ರಾಯವಾಗಿಯೇ ಇರುತ್ತದೆ ಎಂದು ನಾವು ನಂಬಬಹುದು. ಈ ಬಾರಿ ಹನ್ನೊಂದು ದಿನಗಳ ಆಚರಣೆ ಇರುತ್ತದೆ. ಒಂದು ದಿನ ವಿಶೇಷವಾಗಿ ದೇವಿಗೆ ಹೆಚ್ಚಿನ ಒಂದು ಆರಾಧನೆಯನ್ನು ಮಾಡುತ್ತೇವೆ. ಇದರಿಂದ ನಾಡು ಸುಭಿಕ್ಷವಾಗಲಿದೆ. ಎಲ್ಲವೂ ಸಹ ಒಳಿತಾಗಲಿದೆ ಎಂದು ಅಯ್ಯಂಗಾರ್ ಭರವಸೆಯ ಮಾತುಗಳನ್ನಾಡಿದರು.
ಈ ಬಾರಿ ದಸರಾದಲ್ಲಿ ಮೈಸೂರಿಗರಿಗೆ ಸಂಭ್ರಮ ಇನ್ನೊಂದು ದಿನ ಹೆಚ್ಚೇ ಇರಲಿದೆ. ಇದರಲ್ಲಿ ಅಪಶಕುನ ಏನೂ ಇಲ್ಲ. ಎಲ್ಲ ಒಳಿತೇ ಆಗಲಿದೆ. ಹನ್ನೊಂದು ದಿನಗಳ ದಸರಾ ಬಗ್ಗೆ ವದಂತಿ ಹರಡಬೇಕಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ: ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಜನರು ವದಂತಿಗಳಿಗೆ ಕಿವಿಕೊಡಬಾರದು. ವದಂತಿಗಳನ್ನು ನಂಬುವ ಬದಲು ಕ್ಯಾಲೆಂಡರ್ ನೋಡಿ ಸಾಕು. ಹನ್ನೊಂದು ದಿನ ದಸರಾ ಬಂದಿದೆ, ಅದನ್ನು ಸಂಭ್ರಮಿಸಿ. ಕೆಲವರು ಹತ್ತನೇ ದಿನದ ರಾತ್ರಿಗೆ ಪೂಜೆಗಳನ್ನು ಮುಗಿಸಿಕೊಳ್ಳುವವರು ಆವತ್ತೇ ಮುಗಿಸಿಕೊಳ್ಳುತ್ತಾರೆ ಅಷ್ಟೇ. ಮೈಸೂರಿನಲ್ಲಿ ಹನ್ನೊಂದು ದಿನ ನಾಡಹಬ್ಬ ಆಚರಣೆ ನಡೆಯಲಿದೆ. ತಿಥಿ ಎರಡು ದಿನ ಬಂದ ಕಾರಣ ಈ ರೀತಿ ಆಗಿದೆ ಅಷ್ಟೆ. ಸೂರ್ಯೋದಯದಲ್ಲಿ ಪಂಚಮಿ ತಿಥಿ ಇರುವುದರಿಂದ 11 ದಿನ ಬಂದಿದೆ. ಇದು ಒಳ್ಳೆಯದೆಂದೇ ಭಾವಿಸುತ್ತೇವೆ ಎಂದು ಅವರು ಹೇಳಿದರು.
Published On - 12:48 pm, Thu, 19 June 25