ಮೈಸೂರು: ಕೊರೊನಾ ಭೀತಿ ನಡುವೆಯೂ ಸರಳ ಹಾಗೂ ಸಾಂಪ್ರದಾಯಿಕ ದಸರಾ ಯಶಸ್ವಿಯಾಗಿ ನಡೆದಿದೆ. ಚಾಮುಂಡಿ ದೇವಿಯ ಮೆರವಣಿಗೆ ಮಾಡಿ, ಫುಲ್ ರಿಲ್ಯಾಕ್ಸ್ ಮಾಡಿರುವ ಗಜಪಡೆಯನ್ನ ಮೈಸೂರು ಅರಮನೆಯಿಂದ ಬೀಳ್ಕೊಡುಗೆ ನೀಡುವ ಸಮಯ ಸನಿಹಕ್ಕೆ ಬಂದಿದ್ದು ಇಂದು ಅರಮನೆಯಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಗಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆ.13ರಂದು ಮೈಸೂರಿಗೆ 8 ಆನೆಗಳು ಆಗಮಿಸಿದ್ದವು. ಸದ್ಯ ದಸರಾ ಮುಗಿದಿದ್ದು ತಮ್ಮ ತಮ್ಮ ಮನೆಗಳಿಗೆ ಆನೆಗಳು ಹಿಂತಿರುಗುತ್ತಿವೆ. ಅಭಿಮನ್ಯು, ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ ಹೋದ್ರೆ ಅಶ್ವತ್ಥಾಮ ಆನೆ ದೊಡ್ಡ ಹರವೆ ಆನೆ ಶಿಬಿರಕ್ಕೆ ರವಾನಿಸಲಾಗುತ್ತಿದೆ. ಹಾಗೂ ವಿಕ್ರಮ, ಧನಂಜಯ, ಕಾವೇರಿ ದುಬಾರೆ ಆನೆ ಶಿಬಿರ, ಚೈತ್ರ, ಲಕ್ಷ್ಮೀ ಬಂಡೀಪುರದ ರಾಮಪುರ ಕ್ಯಾಂಪ್‌ಗೆ ಲಾರಿಗಳ ಮೂಲಕ ರವಾನಿಸಲಾಗುತ್ತಿದೆ. ಅರಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾ ಆನೆಗಳಿಗೆ ವಿದಾಯ ಹೇಳಲಾಗಿದೆ.
ಇಷ್ಟು ದಿನ ಮೈಸೂರು ಅರಮನೆಯಲ್ಲಿ ರಾಜಾತೀಥ್ಯ ಪಡೆಯುತ್ತಿದ್ದ ಗಜಪಡೆಯ ಕಾಡಿನ ದಿನಚರಿ ಇಲ್ಲಿಗಿಂತ ವಿಭಿನ್ನವಾಗಿರಲಿದೆ. ದಸರಾ ಕ್ಯಾಂಪ್‌ಗೆ ಹೋಗುವ ಆನೆಗಳ ಪಾಲನೆಗೆ ಸಾಕಷ್ಟು ನಿಯಮಗಳಿವೆ. ಆನೆಗಳನ್ನು ಸಹಾ ಸರ್ಕಾರಿ ನೌಕರರೆಂದೇ ಪರಿಗಣಿಸಲಾಗುತ್ತದೆ. ಆನೆಗಳಿಗೆ ನೀಡುವ ಪ್ರಮಾಣ ಸಹಾ ನಿಗದಿಯಾಗಿರುತ್ತದೆ. ಇಲ್ಲಿಯಂತೆ ವಿಶೇಷ ಆಹಾರ ಸಿಗುವುದಿಲ್ಲ. ಆದರೆ ಆನೆಗಳಿಗೆ ಪ್ರಕೃತಿದತ್ತವಾದ ಆಹಾರಗಳು ಯಥೇಚ್ಛವಾಗಿ ಸಿಗುತ್ತದೆ. ಇನ್ನು ಈ ಕಾಡು ಆನೆಗಳು ಕಾಡಿನಲ್ಲಿ ಪ್ರಮುಖ ಸೇನಾನಿಗಳಾಗಿ ಕೆಲಸ ಮಾಡುತ್ತವೆ. ಮುಖ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಿಸುವ ಮಹತ್ವದ ಕೆಲಸಕ್ಕೆ ಈ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಕಾಡಿನಲ್ಲಿ ಸೆರೆ ಸಿಗುವ ಕಾಡಾನೆಗಳನ್ನು ಪಳಗಿಸಲು ಈ ಆನೆಗಳದ್ದೆ ಮಹತ್ವದ ಪಾತ್ರವಾಗಿರುತ್ತದೆ.
ಇದನ್ನೂ ಓದಿ: ದಸರಾ ಹಬ್ಬ ಎಲ್ಲ ಭಾರತೀಯರಿಗೆ ಒಂದೇಯಾದರೂ ಆಚರಣೆಗಳಲ್ಲಿ ಮಾತ್ರ ನಾನಾ ವಿಧ!