ಮೈಸೂರು, ಜುಲೈ 24: ವಿಶ್ವಪ್ರಸಿದ್ಧ ಮೈಸೂರು ದಸರಾ (Mysuru Dasara) ಹಬ್ಬದ ಜಂಬೂ ಸವಾರಿಗಾಗಿ (Jamboo Savari) ಆನೆಗಳ ಮೊದಲ ತಂಡ ಇನ್ನೊಂದು ತಿಂಗಳ ಒಳಗಾಗಿ ನಗರಕ್ಕೆ ಆಗಮಿಸಲಿವೆ. ಹುಣಸೂರಿನ ವೀರನಹೊಸಹಳ್ಳಿಯಿಂದ ದಸರಾ ಆನೆಗಳ ‘ಗಜಪಯಣ’ ಆಗಸ್ಟ್ 23ರಿಂದ ಆಗಸ್ಟ್ 25ರ ನಡುವೆ ನಡೆಯಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ವಿಜಯ ದಶಮಿ ಮೆರವಣಿಗೆಗೆ ಸರಿಯಾಗಿ 60 ದಿನ ಬಾಕಿ ಇದ್ದು, ಹಿಂದಿನ ವರ್ಷದಂತೆ ಅಭಿಮನ್ಯುವೇ ಚಿನ್ನದ ಅಂಬಾರಿ ಹೊತ್ತು ಸಾಗುವ ನಿರೀಕ್ಷೆ ಇದೆ. ಅರ್ಜುನ ಈ ಬಾರಿಯ ದಸರಾ ಮೆರವಣಿಗೆ ಅವಕಾಶ ವಂಚಿತನಾಗುವ ಸಾಧ್ಯತೆ ಇದೆ. ಗೋಪಾಲಸ್ವಾಮಿ, ಗಜೇಂದ್ರ ಕೂಡ ಕೂಡ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.
ಈ ತಿಂಗಳ ಕೊನೆಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.
ನಾವು ಹೊಸ ಆನೆಗಳನ್ನು ಹುಡುಕುತ್ತಿರುವುದು ನಿಜ. ವಿವಿಧ ಶಿಬಿರಗಳಿಗೆ ಭೇಟಿ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಸಮಿತಿ ಅಂತಿಮ ತೀರ್ಮಾನ ಕೈಗೊಂಡ ನಂತರ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಯನ್ನು ಜುಲೈ ಅಂತ್ಯದೊಳಗೆ ಪ್ರಕಟಿಸಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು ವೃತ್ತ) ಮಾಲತಿ ಪ್ರಿಯಾ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಡಿಸಿಎಫ್ (ವನ್ಯಜೀವಿ) ಸೌರಭ್ ಕುಮಾರ್ ಮತ್ತು ಇತರ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡವು ಕಳೆದ ವರ್ಷ ದಸರಾ ಆಚರಣೆಯಲ್ಲಿ ಭಾಗವಹಿಸಿದ್ದ ಆನೆಗಳನ್ನು ಪರಿಶೀಲಿಸಲು ಆನೆ ಶಿಬಿರಗಳಿಗೆ ಭೇಟಿ ನೀಡುತ್ತಿದೆ. ಸಂಭಾವ್ಯ ಹೊಸ ಆನೆಗಳ ಬಗ್ಗೆ ಅಧಿಕಾರಿಗಳು ಮಾವುತರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಈ ಹಿಂದಿನ ಮುಜುಗರದಿಂದ ಎಚ್ಚೆತ್ತ ಅರಣ್ಯ ಇಲಾಖೆ; ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್
‘ನಾವು ಹೊಸ ಆನೆಗಳ ಬಗ್ಗೆ ಮಾಹಿತಿ ಮತ್ತು ಶಿಫಾರಸುಗಳನ್ನು ಪಡೆಯುತ್ತಿದ್ದೇವೆ. ಆದರೆ, ಎಸಿಸಿಎಫ್ ಪ್ರಾಜೆಕ್ಟ್ ಟೈಗರ್, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಇತರ ಅಧಿಕಾರಿಗಳ ನೇತೃತ್ವದ ಸಮಿತಿಯು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ’ ಎಂದು ಸೌರಭ್ ಕುಮಾರ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ನಾಗರಹೊಳೆ ಮೀಸಲು ಅರಣ್ಯದ ಭೀಮನಕಟ್ಟೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಗೆ ಭೇಟಿ ನೀಡಿ ಕಳೆದ ವರ್ಷದ ದಸರಾದಲ್ಲಿ ಪಾಲ್ಗೊಂಡಿದ್ದ ಆನೆಗಳ ಪರಿಶೀಲನೆ ನಡೆಸಲಾಗಿದೆ. ಬಂಡೀಪುರದ ರಾಮಾಪುರ ಆನೆ ಶಿಬಿರ ಹಾಗೂ ಕೊಡಗಿನ ದುಬಾರೆ ಶಿಬಿರಕ್ಕೂ ಭೇಟಿ ನೀಡಲಾಗುವುದು. ಈ ಮಧ್ಯೆ, ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷೆ ನಡೆಸುವಂತೆ ಶಿಬಿರದ ವೈದ್ಯರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Mon, 24 July 23