
ಮೈಸೂರು, ಆಗಸ್ಟ್ 5: ಮೈಸೂರು (Mysuru) ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಾಂಪ್ರದಾಯಿಕವಾಗಿ ಗಜಪಯಣದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಧ್ಯಾಹ್ನ 12:34 ರಿಂದ 12:59 ರ ಶುಭ ಲಗ್ನದಲ್ಲಿ ದಸರಾ ಗಜಪಡೆಯ ಮೊದಲ ಹಂತದ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲಾ ಭರ್ತಿಯಾಗಿರುವ ಸಂದರ್ಭ ಈ ಬಾರಿ ಅದ್ದೂರಿ ದಸರಾ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಇದೇ ಕಾರಣಕ್ಕೆ ಗಜಪಯಣಕ್ಕೆ ಸಹ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸಲಾಯಿತು. ಈ ಬಾರಿ ದಸರೆಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಳ್ಳಲಿವೆ.
ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿದ್ದು, ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಗುರುತು ಮಾಡಲಾಗಿದೆ. ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಕಳೆದ ಬಾರಿಯೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ. ಈ ಬಾರಿಯೂ ಕೂಡ ಅಂಬಾರಿಯನ್ನ ಅಭಿಮನ್ಯು ಹೊರಲಿದ್ದಾನೆ.
ಇದನ್ನೂ ಓದಿ: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ
ಇನ್ನು ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆನೆಗಳು ಲಾರಿಗಳ ಮೂಲಕ ತಲುಪಿದವು. ಆನೆಗಳಿಗೆ ಹಿರಿಯ ಅರಣ್ಯಾಧಿಕಾರಿಗಳು ಸ್ವಾಗತ ಕೋರಿದರು. ನಾಳೆಯೂ ಆನೆಗಳು ಅರಣ್ಯಭವನದಲ್ಲೇ ವಾಸ್ತವ್ಯ ಇರಲಿದ್ದು, ಆಗಸ್ಟ್ 7ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿವೆ. ದಸರಾ ಗಜಪಡೆ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು ಇನ್ನುಮುಂದೆ ಸಾಂಸ್ಕೃತಿಕ ನಗರಿಯ ರಾಜಬೀದಿಗಳಲ್ಲಿ ಗಜಪಡೆಯ ಕಲರವ ಜೋರಾಗಿರಲಿದೆ.