
ಮೈಸೂರು, (ಫೆಬ್ರವರಿ 25): ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತೀಶ್ ಗಡಿಪಾರು ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿದೆ. ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿ ಮೈಸೂರಿನ ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟಕ್ಕೆ ಕಾರಣನಾದ ಆರೋಪಿ ಸತೀಶ್ ಗಡಿಪಾರಿಗೆ ಪೊಲೀಸರು ಸಿದ್ಧತೆ ನಡೆಸಿದ್ದರು. ಆದ್ರೆ, ಪೊಲೀಸರ ಕ್ರಮ ಪ್ರಶ್ನಿಸಿ ಸತೀಶ್ ಪರ ವಕೀಲ ಮೈಸೂರು ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಸತೀಶ್ ಅರ್ಜಿಯನ್ನು ಪುರಸ್ಕರಿಸಿದ್ದು, ಆರೋಪಿ ಸತೀಶ್ನನ್ನು ಗಡಿಪಾರು ಮಾಡದಂತೆ ಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ಮೈಸೂರು ಪೊಲೀಸರಿಗೆ ಹಿನ್ನಡೆಯಾದಂತಾಗಿದೆ.
ಮುಸ್ಲಿಂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಹರಿಬಿಟ್ಟ ಪ್ರಕರಣದ ಆರೋಪಿ ಸತೀಶ್ ಗಡಿಪಾರಿಗೆ ಮೈಸೂರು ನಗರ ಪೊಲೀಸರು ಮುಂದಾಗಿದ್ದು, ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈ ಬಗ್ಗೆ ಸತೀಶ್ ಪರ ವಕೀಲ ಭಾಸ್ಕರ್ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಭಾಗಿಯಾಗಿ ಆಕ್ಷೇಪಣೆ ಸಲ್ಲಿಸಿದ್ದರು. ಅದಾದ ಬಳಿಕ ಪೊಲೀಸರ ನಿರ್ಧಾರ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ದೆಹಲಿ ವಿಧಾನಸಭೆ ಫಲಿತಾಂಶ ಪ್ರಕಟವಾದ ಬಳಿಕ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿದ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಪ್ರಕರಣದ ಆರೋಪಿ ಸತೀಶ್. ಈತನ ಪೋಸ್ಟ್ನಿಂದಾಗಿ ಕೆರಳಿದ ಮುಸ್ಲಿಂ ಸಮುದಾಯ ಸತೀಶ್ನನ್ನು ಕೂಡಲೇ ಬಂಧಿಸಬೇಕೆಂದು ಪ್ರತಿಭಟನೆಗಿಳಿತು. ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಮುಸ್ಲಿಂ ಸಮುದಾಯದ ನೂರಾರು ಜನರು ಸೇರಿಕೊಂಡು ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಪೊಲೀಸರು ಹಾಗೂ ಅವರ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಬಳಿಕ ಪೊಲೀಸರು ಆರೋಪಿ ಸತೀಶ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದ್ರೆ, ಸತೀಶ್ಗೆ ಮೈಸೂರು 2ನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯವು ಜಾಮೀನು ನೀಡಿತ್ತು.
Published On - 8:55 pm, Tue, 25 February 25