ಮೈಸೂರು: ಸಾಮೂಹಿಕ ಅತ್ಯಾಚಾರ ಆರೋಪಿಗಳ ಪೊಲೀಸ್​ ಕಸ್ಟಡಿ ಅವಧಿ ಅಂತ್ಯ; ಇಂದು ನ್ಯಾಯಾಧೀಶರ ಮುಂದೆ ಹಾಜರು

| Updated By: Skanda

Updated on: Sep 07, 2021 | 7:09 AM

ಬಂಧಿತ 6 ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿರುವುದರಿಂದ ಅವರನ್ನು ನ್ಯಾಯಾಲಯಕ್ಕೆ ಕರೆತರಲಿದ್ದಾರೆ. ಬಳಿಕ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡುವ ಸಾಧ್ಯತೆಯೂ ಇದೆ.

ಮೈಸೂರು: ಸಾಮೂಹಿಕ ಅತ್ಯಾಚಾರ ಆರೋಪಿಗಳ ಪೊಲೀಸ್​ ಕಸ್ಟಡಿ ಅವಧಿ ಅಂತ್ಯ; ಇಂದು ನ್ಯಾಯಾಧೀಶರ ಮುಂದೆ ಹಾಜರು
ದುಷ್ಕೃತ್ಯ ನಡೆದ ಸ್ಥಳ
Follow us on

ಮೈಸೂರು: ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳನ್ನು ಬಂಧಿಸಿ ತಮ್ಮ ವಶದಲ್ಲಿಟ್ಟುಕೊಂಡಿದ್ದ ಪೊಲೀಸರು ಇಂದು ಆ ಎಲ್ಲಾ ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಬಂಧಿತ 6 ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗುತ್ತಿರುವುದರಿಂದ ಅವರನ್ನು ನ್ಯಾಯಾಲಯಕ್ಕೆ ಕರೆತರಲಿದ್ದಾರೆ. ಬಳಿಕ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡುವ ಸಾಧ್ಯತೆಯೂ ಇದೆ.

ಅತ್ಯಾಚಾರಿಗಳ ಜಾಡು ಹಿಡಿದು ಹೊರಟ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ತಮಿಳುನಾಡಿನ ಮೂಲದ ಐವರನ್ನು ಮೊದಲು ಬಂಧಿಸಿದ್ದರು. ತನಿಖೆ ವೇಳೆ ಒಟ್ಟು 6 ಮಂದಿ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಲಾಗಿತ್ತಾದರೂ ಆರೋಪಿಗಳ ಬಂಧನದ ಬಳಿಕ 7 ಮಂದಿ ಇರುವುದು ತಿಳಿದುಬಂದಿತ್ತು. ತಲೆಮರೆಸಿಕೊಂಡ ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆಸಿದ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಸಫಲರಾದರು. ಸದ್ಯ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆಯಾದರೂ ಇಲ್ಲಿಯ ತನಕ ಆತ ಪತ್ತೆಯಾಗಿಲ್ಲ.

ಬಂಧಿತ ಆರೋಪಿಗಳನ್ನು ವಿಚಾರಣೆ ಸಲುವಾಗಿ 10 ದಿನ ತಮ್ಮ ಕಸ್ಟಡಿಗೆ ನೀಡಬೇಕೆಂದು ಕೇಳಿಕೊಂಡಿದ್ದ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು. ಅದರಂತೆ ಬಂಧಿತ ಆರು ಆರೋಪಿಗಳನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡ ಪೊಲೀಸರು ಈಗಾಗಲೇ ಮಹಜರು, ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ಇಂದಿಗೆ ಈ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯೂ ಮುಗಿಯಲಿದೆ. ಹೀಗಾಗಿ ಪೊಲೀಸರು ಇಂದು ಆರೋಪಿಗಳನ್ನು ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸುವ ಸಾಧ್ಯತೆ ಇದೆ.

ಆರೋಪಿಗಳಿಗೆ ದುಷ್ಕೃತ್ಯ ಎಸಗಲು ಧೈರ್ಯ ನೀಡಿದ ಸಂಗತಿ ಇದು
ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ದುಷ್ಕೃತ್ಯ ಎಸಗಲು ಆರೋಪಿಗಳಿಗೆ ಧೈರ್ಯ ನೀಡಿದ ಅಂಶವೊಂದು ಬಯಲಾಗಿತ್ತು. ಈ ಹಿಂದೆಯೂ ಮೈಸೂರಿನಲ್ಲಿ ಅದರಲ್ಲೂ ಚಾಮುಂಡಿ ಬೆಟ್ಟದ ಸುತ್ತಮುತ್ತಲ ಭಾಗದಲ್ಲಿ ಬಂಧಿತ ಆರೋಪಿಗಳು ಹಲವು ದರೋಡೆ ಮಾಡಿರುವ ಕುರಿತು ಬಾಯ್ಬಿಟ್ಟಿದ್ದರು. ಈ ಹಿಂದೆ ಮಾಡಿದ್ದ ಅಪರಾಧಗಳ ಬಗ್ಗೆ ದೂರು ನೀಡಿರಲಿಲ್ಲ. ಯಾರೂ ಕೂಡ ನಮ್ಮ ವಿರುದ್ಧ ದೂರು ನೀಡದ ಹಿನ್ನೆಲೆ. ಇಂಥ ದುಷ್ಕೃತ್ಯವೆಸಗಲು ನಾವು ಮೈಸೂರಿಗೆ ಬರುತ್ತಿದ್ದೆವು. ಚಾಮುಂಡಿ ಬೆಟ್ಟದ ಸುತ್ತಮುತ್ತ ಅಪರಾಧ ಮಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದರು.

ಈ ಹಿಂದಿನ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸರಿಗೆ ದೂರು‌ ಕೊಡದಿರುವುದೆ ಆರೋಪಿಗಳಿಗೆ ಪ್ಲಸ್ ಪಾಯಿಂಟ್ ಆಗಿದ್ದು, ದರೋಡೆ ನಡೆಸುವುದು ಸುಲಭವಾಗಿತ್ತು. ದರೋಡೆಯ ನಂತರ ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂಬುದನ್ನು ಕಂಡುಕೊಂಡ ಆರೋಪಿಗಳು ಎಗ್ಗಿಲ್ಲದೆ ದುಷ್ಕೃತ್ಯ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:
ಮೈಸೂರಿನಲ್ಲಿ ಹಲ್ಲೆ, ಅತ್ಯಾಚಾರ ಪ್ರಕರಣದ ಹಿಂದೆ ಪ್ರೇಮ ಪುರಾಣದ ಲಿಂಕ್! 

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ; ಕದ್ದ ಮೊಬೈಲ್​ನಿಂದ ಸಿಕ್ಕಿಬಿದ್ದ ಆರೋಪಿಗಳು