ಮೈಸೂರು, ಮಾರ್ಚ್ 12: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಈ ಬಾರಿ ಪ್ರತಾಪ್ ಸಿಂಹ (Pratap Simha) ಬದಲು ರಾಜವಂಶಸ್ಥರಾದ ಯದುವೀರ್ ಒಡೆಯರ್ಗೆ ಬಿಜೆಪಿ (BJP) ಟಿಕೆಟ್ ನೀಡಲಿದೆ ಎಂಬ ಬಗ್ಗೆ ವರದಿಗಳಾಗಿವೆ. ಈ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯದುವೀರ್ಗೆ ಟಿಕೆಟ್ ಕೊಟ್ಟರೆ ಸ್ವಾಗತ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ದರ್ಬಾರಿನಲ್ಲಿರುವ ಬದಲು ಸಾಮಾನ್ಯ ಪ್ರಜೆಗಳಂತೆ ಬದುಕಲು ಬಂದರೆ ಸ್ವಾಗತಿಸದಿರಲು ಆಗುತ್ತದೆಯೇ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ರಾಜ-ಪ್ರಜೆ ನಡುವಣ ವ್ಯತ್ಯಾಸ ಬದಿಗಿಟ್ಟು ಬಂದರೆ ಅವರಿಗೆ ಸ್ವಾಗತ. ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಆ ಆಸ್ತಿಗಳನ್ನು ಜನರಿಗೆ ಬಿಟ್ಟು ಕೊಡಿಸುತ್ತಾರೆ. ಅರಮನೆಯಲ್ಲಿ ಅರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರುತ್ತಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದ್ರೆ ಸಂತೋಷ. ಅರಮನೆ ವೈಭೋಗ ಬೇಡ, ಹೋರಾಟಕ್ಕೆ ಬರುತ್ತೇನೆ ಅಂದರೆ ಸ್ವಾಗತ. ಠಾಣೆಗೆ ಬಂದು ರಾಜರು ಸಮಸ್ಯೆ ಬಗೆಹರಿಸಿದರೆ ಸಂತೋಷ ಅಲ್ವಾ ಎಂದು ಅವರು ಹೇಳಿದರು.
ಸುಖದ ಸುಪತ್ತಿಗೆಯಲ್ಲಿದ್ದವರನ್ನು ರಾಜಕೀಯಕ್ಕೆ ತಂದವರಿಗೆ ಧನ್ಯವಾದ. ಮಹಾರಾಜರನ್ನೇ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಭೇಟಿ ಮಾಡುವಂತೆ ಕರೆದಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತೇನೆ. ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ಧಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ಹಿಂದುತ್ವದ ಬಗ್ಗೆ ನನ್ನಷ್ಟು ಬದ್ಧತೆ ಇರುವವರು ಇನ್ಯಾರಿದ್ದಾರೆ? ಹಿಂದುತ್ವದ ವಿಚಾರದಲ್ಲಿ ನನ್ನನ್ನು ಯಾರ ಜತೆಗೂ ಹೋಲಿಕೆ ಮಾಡಲು ಆಗಲ್ಲ.
ಇದನ್ನೂ ಓದಿ: ಟಿಕೆಟ್ ಕೈತಪ್ಪುವ ಆತಂಕದಲ್ಲಿ ಸಂಸದ ಪ್ರತಾಪ್ ಸಿಂಹ: ನಡುರಾತ್ರಿ ಫೇಸ್ಬುಕ್ ಲೈವ್ನಲ್ಲಿ ಕಣ್ಣೀರು!
ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದಾಗ ಅವರ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು, ಕೊಡಗು ಅಭಿವೃದ್ಧಿಗೆ ಅತಿ ಹೆಚ್ಚಿನ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ? ನನಗೆ ಪಕ್ಷ ನಿಷ್ಠೆ ಇದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ಧ. ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೇ ದುಡಿಯುತ್ತೇನೆ. ಯದುವೀರ್ಗೆ ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Tue, 12 March 24