ಮೈಸೂರು, (ಅಕ್ಟೋಬರ್ 24): ಮೈಸೂರು ಅರಮನೆ ಪ್ರವೇಶ ದರ ಹೆಚ್ಚಳ ಮಾಡಲಾಗಿದೆ. ಟಿಕೆಟ್ ದರದ ಮೇಲೆ ಜಿಎಸ್ಟಿ ಸೇರಿಸಿ ಹೆಚ್ಚಿಸಲಾಗಿದೆ. ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಬರೋಬ್ಬರಿ 900 ರೂ. ಹೆಚ್ಚಳ ಮಾಡಿದ್ದರೆ, ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ಏರಿಕೆ ಮಾಡಲಾಗಿದೆ. ನಾಳೆಯಿಂದಲೇ(ಅಕ್ಟೋಬರ್ 25) ಪರಿಷ್ಕೃತ ದರ ಜಾರಿಗೆ ಬರಲಿದೆ. ಇನ್ನು ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದೆ. ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಹಿಂದೆ ವಿದೇಶಿಯರಿಗೆ 100 ರೂ. ಪ್ರವೇಶ ಶುಲ್ಕವಿತ್ತು. ಈಗ ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ 900 ರೂ. ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆ ಪ್ರವೇಶ ದರ ಒಟ್ಟು 1,000 ರೂ. ನಿಗದಿ ಮಾಡಲಾಗಿದೆ. ಇನ್ನು ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ನಿಗದಿಪಡಿಸಲಾಗಿದೆ.
10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ ಪ್ರವೇಶ ಶುಲ್ಕ ಫಿಕ್ಸ್ ಮಾಡಿದ್ದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿಪಡಿಸಿದೆ. ಇನ್ನು ಅರಮನೆ ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದ್ದು, ಉಚಿತ ಸೇವೆ ನೀಡಲು ಅರಮನೆ ಮಂಡಳಿ ತೀರ್ಮಾನ ಕೈಗೊಂಡಿದೆ.
ಈ ಮೊದಲು ವಯಸ್ಕರಿಗೆ ಪ್ರವೇಶ ಶುಲ್ಕ 100 ರೂ., 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 50 ರೂ., ಪ್ರವಾಸ ಕೈಗೊಳ್ಳುವ ಶಾಲಾ/ಕಾಲೇಜು ಮಕ್ಕಳಿಗೆ 30 ರೂ., ವಿದೇಶಿ ಪ್ರವಾಸಿಗರಿಗೆ 100 ರೂ. ಇತ್ತು. ಇದಕ್ಕೆ ಇದೀಗ ಶೇ.18ರಷ್ಟು ಜಿಎಸ್ಟಿ ಸೇರಿಸಲಾಗಿದೆ. ಈವರೆಗೆ ಅರಮನೆ ಆಡಳಿತ ಮಂಡಳಿ ಜಿಎಸ್ಟಿ ಕಟ್ಟುತ್ತಿತ್ತು. ಈಗ ಶುಲ್ಕದಲ್ಲೇ ಪಡೆಯಲು ನಿರ್ಧರಿಸಿದೆ.
ನಾಡಹಬ್ಬ ದಸರಾ-2024ರ ಸಂಬಂಧ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ, ಮೈಸೂರು ಅರಮನೆ ಆವರಣದಲ್ಲಿ ಸಂಜೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಇಂದಿನಿಂದ (ಅ.24) ಪುನರಾರಂಭವಾಗಿದೆ ಎಂದು ಸಹ ಉಪ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.