ಮೈಸೂರು ಪ್ರಜಾಸೇವೆ: ನನ್ನ ಕಾರು ಕಳ್ಳತನವಾಗಿದೆ ಎಂದ ವ್ಯಕ್ತಿ; ಸಿಎಂ ಜೊತೆ ಜಗಳಕ್ಕೆ ನಿಂತ ವಿಕಲಚೇತನ
ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಕೆಲ ಕುತೂಹಲಕಾರಿ ಪ್ರಸಂಗಗಳು ನಡೆದವು. ಓರ್ವ ವ್ಯಕ್ತಿ ನನ್ನ ಕಾರು ಕಳ್ಳತನವಾಗಿದ್ದು, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಸಿದರು. ಇನ್ನು ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಜೊತೆ ವಿಕಲಚೇತನ ವ್ಯಕ್ತಿ ಜಗಳಕ್ಕೆ ನಿಂತ ಘಟನೆ ಕೂಡ ನಡೆದಿದೆ.

ಮುಖ್ಯಾಂಶಗಳು
- ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮ
- ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಿಎಂಗೆ ದೂರು ನೀಡಿದ ವ್ಯಕ್ತಿ
- ಸಿಎಂ ಜೊತೆಗೆ ಜಗಳಕ್ಕೆ ನಿಂತ ವಿಕಲಚೇತನ
ಮೈಸೂರು, ಅಕ್ಟೋಬರ್ 03: ‘ನನ್ನ ಕಾರು ಕಳ್ಳತನವಾಗಿದೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ’ ಎಂದು ಸಿಎಂ ಡಿಕೆ ಶಿವಕುಮಾರ್ಗೆ ವ್ಯಕ್ತಿ ದೂರು ನೀಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ‘ಕಳ್ಳರ ಜೊತೆ ಪೊಲೀಸರು ಶಾಮೀಲಾಗಿದ್ದಾರೆ’ ಎಂದು ಸಿಎಂ ಎದುರೇ ವ್ಯಕ್ತಿ ಗಂಭೀರ ಆರೋಪ ಕೂಡ ಮಾಡಿದ್ದಾರೆ.
ಇಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಪ್ರಜಾಸೇವೆ ಕಾರ್ಯಕ್ರಮವನ್ನು ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಬಳಿಕ ಜನರ ಸಮಸ್ಯೆ ಆಲಿಸಲು ಮುಂದಾದರು. ಈ ವೇಳೆ ಓರ್ವ ವ್ಯಕ್ತಿ ನನ್ನ ಕಾರು ಕಳ್ಳತನವಾಗಿದೆ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ, ಕಳ್ಳರೊಂದಿಗೆ ಅವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗೆ ಡಿಕೆ ಶಿವಕುಮಾರ್ ಸೂಚನೆ
ವ್ಯಕ್ತಿ ಸಮಸ್ಯೆ ಆಲಿಸಿದ ಸಿಎಂ ಆ ರೀತಿ ಯಾಕೆ ಆರೋಪ ಮಾಡ್ತಿದ್ದೀಯಾ ಎಂದು ಕೇಳಿದ್ದಾರೆ. ಪೊಲೀಸರು ದೂರು ಸ್ವೀಕಾರ ಮಾಡದಿರುವುದೇ ಅನುಮಾನಕ್ಕೆ ಕಾರಣವಾಗಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಈ ವೇಳೆ ದೂರು ಸ್ವೀಕರಿಸಿ ಪ್ರಕರಣ ಇತ್ಯರ್ಥ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಡಿಕೆ ಶಿವಕುಮಾರ್ ಸೂಚನೆ ನೀಡಿದರು.
1.50 ಲಕ್ಷಕ್ಕೆ ಬಡ್ಡಿ ಸೇರಿ 50 ಲಕ್ಷ ರೂ ಮೀಟರ್ ಬಡ್ಡಿ ಕೇಳುತ್ತಿದ್ದಾರೆ: ಸಿಎಂ ಮುಂದೆ ರೈತನ ಅಳಲು
‘ಭೂಮಿಯನ್ನು ತನ್ನ ಹೆಸರಿಗೆ ಬರೆದುಕೊಡಲು ಮೀಟರ್ ಬಡ್ಡಿ ಕೇಳುತ್ತಿದ್ದಾರೆ’ ಎಂದು ಡಿಕೆ ಶಿವಕುಮಾರ್ ಬಳಿ ಓರ್ವ ರೈತ ಅಳಲು ತೋಡಿಕೊಂಡರು. ‘1.50 ಲಕ್ಷಕ್ಕೆ ಬಡ್ಡಿ ಸೇರಿ 50 ಲಕ್ಷ ರೂ ಮೀಟರ್ ಬಡ್ಡಿ ಕೇಳುತ್ತಿದ್ದಾರೆ. ಅಡಮಾನವಿಟ್ಟ ಭೂಮಿ ವಾಪಸ್ ಕೊಡಲು ಸತಾಯಿಸುತ್ತಿದ್ದಾನೆ. ಸದ್ಯ ನಾನು ಅದೇ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದೇನೆ, ಆದರೆ ಭೂಮಿಯನ್ನು ನನ್ನ ಹೆಸರಿಗೆ ವಾಪಸ್ ಬರೆದುಕೊಡುತ್ತಿಲ್ಲ. ಸಮಸ್ಯೆ ಬಗೆಹರಿಸಿ’ ಎಂದು ಸಿಎಂಗೆ ಮನವಿ ಮಾಡಿದರು.
ಸಿಎಂ ಜೊತೆ ಜಗಳಕ್ಕೆ ನಿಂತ ವಿಕಲಚೇತನ ವ್ಯಕ್ತಿ
ಇನ್ನು ಜನರ ಸಮಸ್ಯೆ ಆಲಿಸುತ್ತಿದ್ದ ವೇಳೆ ವಿಕಲಚೇತನ ವ್ಯಕ್ತಿ ಸಿಎಂ ಜೊತೆ ಜಗಳಕ್ಕೆ ನಿಂತ ಘಟನೆ ನಡೆಯಿತು. ‘ಸಾಗುವಳಿ ಭೂಮಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ನಿಂತಿದ್ದಾರೆ’ ಎಂದು ಅರಣ್ಯ ಇಲಾಖೆ ಮಾಜಿ ಸಚಿವ ಈಶ್ವರ್ ಖಂಡ್ರೆ ಸಮ್ಮುಖದಲ್ಲೇ ಸಿಎಂ ಜೊತೆ ಜಗಳ ಮಾಡಿದರು.
ಇದನ್ನೂ ಓದಿ: ಇಂದಿನಿಂದ ಕೇಂದ್ರ ಬರ ಅಧ್ಯಯನ ತಂಡದಿಂದ ರಾಜ್ಯ ಪ್ರವಾಸ; 3705.30 ಕೋಟಿ ರೂ. ಪರಿಹಾರಕ್ಕೆ ಸಿಎಂ ಮನವಿ
ಈ ವೇಳೆ ಈಶ್ವರ್ ಖಂಡ್ರೆ ಮಧ್ಯ ಪ್ರವೇಶ ಮಾಡಿದಾಗ ಸಿಎಂ ಸುಮ್ಮನಿರಿಸಿದರು. ‘ಸಾಕಷ್ಟು ವರ್ಷಗಳಿಂದ ನಾನು ಅಲ್ಲೇ ವ್ಯವಸಾಯ ಮಾಡಿಕೊಂಡಿದ್ದೇನೆ’ ಎಂದು ವಿಕಲಚೇತನ ವ್ಯಕ್ತಿ ಅಳಲು ತೋಡಿಕೊಂಡರು. ಈ ವೇಳೆ ಅರ್ಜಿ ನೋಡಿ, ಕೋರ್ಟ್ ಆರ್ಡರ್ ಪರಿಶೀಲಿಸಿದರು. ‘ಕೋರ್ಟ್‌ನಲ್ಲಿ ಯಾರು ನಿನ್ನ ಖಾಲಿ ಮಾಡಬೇಡ ಎಂದಿದ್ದಾರೆ ಅಲ್ವಾ, ಹಾಗಾದರೆ ಬಿಗಿಯಾಗಿ ಅಲ್ಲೇ ಇರು’ ಎಂದು ಹೇಳುವ ಮೂಲಕ ಜಗಳಕ್ಕೆ ನಿಂತ ವಿಕಲಚೇತನನಿಗೆ ಸಿಎಂ ಸಮಾಧಾನ ಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:22 pm, Sat, 3 October 26




