ಮೈಸೂರು, ಡಿಸೆಂಬರ್ 12: ಮೈಸೂರಿನ ಗ್ರಾಮಗಳಲ್ಲಿ ಭೀತಿ ಹುಟ್ಟಿಸಿರುವ ಹುಲಿಯ (Tiger) ಸೆರೆಗೆ ಅರಣ್ಯ ಇಲಾಖೆ ಹರಸಾಹಸಪಡುವಂತಾಗಿದೆ. ಕಳೆದ ಒಂದು ತಿಂಗಳಿನಿಂದ ದೊಡ್ಡಕನ್ಯಾ, ಚಿಕ್ಕಕನ್ಯಾ, ಬೈತಹಳ್ಳಿ, ಸಿಂದಿವಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಹುಲಿ ಭಯ ಹುಟ್ಟಿಸಿದ್ದು, ಅರಣ್ಯ ಇಲಾಖೆಯೊಂದಿಗೆ (Forest Department) ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ಮಧ್ಯೆ, ಒಂದೂವರೆ ವರ್ಷದ ಹುಲಿಯನ್ನು ಸೆರೆಹಿಡಿಯಲು ಸರಗೂರು ಟ್ರಾಕ್ ತಂಡ ಮತ್ತು ಅಗ್ನಿಶಾಮಕ, ತುರ್ತು ಸೇವೆಗಳ ಸಿಬ್ಬಂದಿ ಜಂಟಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಜತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಡಿಸೆಂಬರ್ 1 ರಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದ ಹುಲಿ ನಂತರ ಎರಡು ದಿನ ಕಣ್ಮರೆಯಾಗಿತ್ತು. ನಂತರ, ದೊಡ್ಡಕನ್ಯಾ ಮತ್ತು ಚಿಕ್ಕಕನ್ಯಾದಲ್ಲಿನ ಕಬ್ಬಿನ ಗದ್ದೆಗಳಲ್ಲಿಟ್ಟಿದ್ದ ಕ್ಯಾಮೆರಾಗಳಲ್ಲಿ ಅದರ ಚಲನವಲನ ಸೆರೆಯಾಗಿತ್ತು. ಅದರ ಆಧಾರದಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ತೀವ್ರಗೊಳಿಸಿತು. ಡಿಸೆಂಬರ್ 8 ರಂದು ಮತ್ತೆ ಹುಲಿಯ ಚಲನವಲನ ಕಂಡುಬಂದಿತ್ತು. ಅನೇಕ ಪ್ರಯತ್ನಗಳ ಹೊರತಾಗಿಯೂ, ಹುಲಿ ತಪ್ಪಿಸಿಕೊಂಡಿದೆ.
ಇದನ್ನೂ ಓದಿ: ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯ ಚಲನವಲನ ಸಿಸಿಕ್ಯಾಮೆರಾದಲ್ಲಿ ಸೆರೆ
ಅರಣ್ಯ ಇಲಾಖೆ ಅಧಿಕಾರಿಗಳು, ತಜ್ಞರು ಸೇರಿದಂತೆ 100 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಅರಣ್ಯ ಇಲಾಖೆ ಸಿಬ್ಬಂದಿಯ ಅನುಭವದ ಕೊರತೆಯಿಂದಾಗಿ ಕಾರ್ಯಾಚರಣೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಸಿಬ್ಬಂದಿ ಆರಂಭದಲ್ಲಿ ಹುಲಿ ಇರುವಿಕೆಯ ವರದಿಗಳನ್ನು ತಳ್ಳಿಹಾಕಿದರು ಮತ್ತು ಅದನ್ನು ಚಿರತೆ ಎಂದು ಹೇಳಿದ್ದರು. ಅರಣ್ಯ ಸಿಬ್ಬಂದಿಗಳು ಹುಲಿಯನ್ನು ಪತ್ತೆ ಮಾಡಿದ ನಂತರವೇ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ