ಮೈಸೂರು: ಯಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ 24 ವರ್ಷದ ನಿಶ್ಚಯ್ ಪ್ರಸಾದ್ 130ನೇ ರ್‍ಯಾಂಕ್ ಗಳಿಸಿದ್ದಾರೆ. ಈ ಮೂಲಕ ಅವರು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಮೈಸೂರಿನ ರಾಮಕೃಷ್ಣ ನಗರದ ನಿವಾಸಿಯಾಗಿರುವ ಅವರು, ಕೆ.ಎಂ.ಪ್ರಸಾದ್ ಹಾಗೂ ಡಾ.ಗಾಯತ್ರಿ ಪುತ್ರರಾಗಿದ್ದಾರೆ. ತಂದೆ ಕೆ.ಎಂ.ಪ್ರಸಾದ್ ಗುತ್ತಿಗೆದಾರರಾಗಿದ್ದು, ತಾಯಿ ಡಾ.ಗಾಯತ್ರಿ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ನಿಶ್ಚಯ್, ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಡಶಾಲಾ ಶಿಕ್ಷಣ ಮುಗಿಸಿದರು. ನಂತರ ಅವರು ಎಸ್‌ಜೆಸಿಇ ಕಾಲೇಜಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದರು. ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 621 ಅಂಕ, ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 590 ಅಂಕ ಗಳಿಸಿದ್ದ ನಿಶ್ಚಯ್ ಪ್ರಸಾದ್ ಆಗಲೇ ಎಲ್ಲರ ಗಮನ ಸೆಳೆದಿದ್ದರು. ಪ್ರಸ್ತುತ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಅವರು, ಇದಕ್ಕಾಗಿ ಯಾವುದೇ ತರಬೇತಿ ಸಂಸ್ಥೆಯ ಸಹಾಯ ಪಡೆದಿಲ್ಲ. ಅದರ ಬದಲಾಗಿ ಸ್ವಂತ ಶ್ರಮದಿಂದ ಓದಿ ಉತ್ತಮ ಸ್ಥಾನ ಗಳಿಸಿದ್ದಾರೆ.
ರ್‍ಯಾಂಕ್ ಪಡೆದಿರುವ ಖುಷಿಯನ್ನು ಟಿವಿ9ನೊಂದಿಗೆ ಹಂಚಿಕೊಂಡಿರುವ ಅವರು, ಸಮಾಜ ಸೇವೆ ತನ್ನ ಗುರಿ ಎಂದು ಹೇಳಿದ್ದಾರೆ. ‘‘ಐಎಎಸ್ ಅಥವಾ ಐಪಿಎಸ್ ಯಾವುದೇ ಆಗಲಿ ಖುಷಿ ಕೊಡುತ್ತದೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಇದು ಅಧಿಕಾರ ಅಲ್ಲ ಜವಾಬ್ದಾರಿ. ನನ್ನ ಸಾಧನೆಗೆ ಸ್ಪೂರ್ತಿ ತಂದೆ, ತಾಯಿ ಹಾಗೂ ಅಣ್ಣ’’ ಎಂದು ಅವರು ನುಡಿದಿದ್ದಾರೆ. ದೇಶದ ಯಾವುದೇ ಜಾಗದಲ್ಲಿ ಆದರೂ ಸರಿ ಸೇವೆ ಸಲ್ಲಿಸಲು ತಾನು ಸಿದ್ಧನಿದ್ದೇನೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಪ್ರಮೋದ್ ಆರಾಧ್ಯಗೆ 601ನೇ ಸ್ಥಾನ:
ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಹಳ್ಳಿ ಗ್ರಾಮದ ರೈತ ಕುಟುಂಬದಿಂದ ಬಂದ ಪ್ರಮೋದ್ ಆರಾಧ್ಯ 691ನೇ ಸ್ಥಾನ ಗಳಿಸಿದ್ದಾರೆ. ಎರಡು ವಾರಿ ಯುಪಿಎಸ್ಸಿ ಪರೀಕ್ಷೆ ಬರೆದು ಸಂದರ್ಶನ ಕೂಡ ಎದುರಿಸಿದ್ದ ಅವರಿಗೆ 3ನೇ ಪ್ರಯತ್ನದಲ್ಲಿ 601ನೇ ರ್‍ಯಾಂಕ್ ಲಭಿಸಿದೆ.
ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ 35 ಅಧಿಕ ಅಭ್ಯರ್ಥಿಗಳು ರ್‍ಯಾಂಕ್ ಪಡೆದಿದ್ದು, ಅಕ್ಷಯ್ ಸಿಂಹ ಕರ್ನಾಟಕಕ್ಕೆ ಮೊದಲ ರ್‍ಯಾಂಕ್ (ರಾಷ್ಟ್ರೀಯ ಮಟ್ಟದಲ್ಲಿ 77) ಗಳಿಸಿದ್ದಾರೆ. ಸಿರಿ ವೆನ್ನಲ ಮೂರನೇ ಸ್ಥಾನ (ದೇಶದ ಮಟ್ಟದಲ್ಲಿ 204) ಗಳಿಸಿದ್ದಾರೆ.
ಇದನ್ನೂ ಓದಿ:
ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್
UPSC: ಯುಪಿಎಸ್ಸಿ ಫಲಿತಾಂಶ ಪ್ರಕಟ; ಅಕ್ಷಯ್ ಸಿಂಹಗೆ 77ನೇ ರ್‍ಯಾಂಕ್, ಸಿರಿವೆನ್ನೆಲಗೆ 204ನೇ ರ್‍ಯಾಂಕ್
(Nishchay Prasad from Mysuru got 130th rank in UPSC and 2nd rank in state)
Published On - 9:36 am, Sat, 25 September 21