ಮೈಸೂರು ದಸರಾ-2023: ಗಜಪಡೆ ಪಟ್ಟಿ ತಯಾರಿ, ಮೊದಲ ಹಂತದಲ್ಲಿ ಅರಮನೆಗೆ ಆಗಮಿಸಲಿರುವ ಆನೆಗಳ ವಿವರ ಇಲ್ಲಿದೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗಜಪಡೆ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ 9 ಆನೆಗಳನ್ನು ಅಂತಿಮಗೊಳಿಸಲಾಗಿದೆ. ಹಾಗಾದ್ರೆ, ಮೊದಲ ಹಂತದಲ್ಲಿ ಮೈಸೂರಿನ ಅರಮನೆಗೆ ಯಾವೆಲ್ಲ ಆನೆಗಳು ಆಗಮಿಸಲಿವೆ ಎನ್ನುವ ವಿವರ ಈ ಕೆಳಗಿನಂತಿದೆ.
ಮೈಸೂರು, (ಆಗಸ್ಟ್ 09): ಈ ಬಾರಿಯ ಮೈಸೂರು ದಸರಾ-2023 (Mysore Dasara) ಸಕಲ ಸಿದ್ಧತೆಗಳು ಆರಂಭವಾಗಿದ್ದು, ಜಂಬು ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು(elephants) ಅಂತಿಮಗೊಳಿಸಲಾಗಿದೆ. ಕಳೆದ 15 ದಿನಗಳಿಂದ ದಸರಾದಲ್ಲಿ ಪಾಲ್ಗೊಳ್ಳಬೇಕಾದ ಆನೆಗಳ ಆರೋಗ್ಯ ತಪಾಸಣೆ ಮಾಡಿದ್ದು, ಇದೀಗ ಜಂಬು ಸವಾರಿಗೆ ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ನಿನ್ನೆ(ಆಗಸ್ಟ್ 08) ಅರಣ್ಯಧಿಕಾರಿಗಳು ಸಭೆ ನಡೆಸಿ ಆನೆಗಳ ಪಟ್ಟಿ ಫೈನಲ್ ಮಾಡಿದ್ದು, ಮತ್ತೊಂದು ಸಭೆ ನಡೆಸಿ ಎರಡನೇ ಪಟ್ಟಿ ತಯಾರು ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಮೊದಲ ಹಂತದಲ್ಲಿ ಅರಮೆನೆಗೆ ಹೆಜ್ಜೆ ಹಾಕಲಿರುವ ಆನೆಗಳು ಯಾವವು ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.
ಸೆಪ್ಟೆಂಬರ್ 1ರಂದು ಗಜಪಯಣದಲ್ಲಿ 9 ಆನೆಗಳು ವೀರನಹೊಸಹಳ್ಳಿಯಿಂದ ಅರಮನೆಗೆ ಆಗಮಿಸಲಿವೆ. ನಾಗರಹೊಳೆ ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ ಆಗಮಿಸುತ್ತಿದ್ದರೆ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ ಅರ್ಜುನ ಹಾಗೂ ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ, ವಿಜಯ ಆನೆಯನ್ನು ಅಂತಿಮಗೊಳಿಸಲಾಗಿದೆ. ಇನ್ನು ಬಂಡೀಪುರದ ರಾಮಪುರ ಶಿಬಿರದಿಂದ ಪಾರ್ಥ ಸಾರಥಿ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷಿ ಆನೆ ಮೊದಲ ಹಂತದಲ್ಲಿ ಅರಮನೆಗೆ ಆಗಮಿಸಲಿವೆ.
ಸೆಪ್ಟೆಂಬರ್ 1ಕ್ಕೆ ಮೈಸೂರಿಗೆ ಗಜ ಪಡೆ ಆಗಮಿಸಲಿದ್ದು, ಮೈಸೂರು ಜಿಲ್ಲಾಡಳಿತ ಸ್ವಾಗತದಿಂದ ಸ್ವಾಗತಿಸಲಾಗುತ್ತದೆ. ಇನ್ನು ಈ ಬಾರಿ 14 ಆನೆಗಳು ಗಜ ಪಯಣದ ಮೂಲಕ ಮೈಸೂರಿಗೆ ಆಗಮನವಾಗಲಿದ್ದು, ಹುಣಸೂರು ತಾಲ್ಲೂಕು ವೀರನ ಹೊಸಹಳ್ಳಿಯಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ಸಿ ಮಹಾದೇವಪ್ಪ ಮೊನ್ನೇ ಅಷ್ಟೇ ಹೇಳಿದ್ದರು.
ಇನ್ನಷ್ಟು ಮೈಸೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ