ಮೈಸೂರು, ಸೆಪ್ಟೆಂಬರ್ 03: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತವರು ಜಿಲ್ಲೆ ಮೈಸೂರಿಗೆ ತೆರಳಿದ್ದಾರೆ. ಇಂದು (ಸೆ.03) ತಾಯಿ ಚಾಮುಂಡೇಶ್ವರಿ (Chamundeshwari) ದರ್ಶನ ಪಡೆಯಲಿದ್ದಾರೆ. ದೇವಿ ದರ್ಶನದ ನಂತರ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ (Chamundeshwari Development Authority) ಸಭೆ ನಡೆಸಲಿದ್ದಾರೆ. ಆದರೆ ಈ ಸಭೆಗೆ ರಾಜಮನೆತನದಿಂದ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಪ್ರಾಧಿಕಾರ ಸಭೆಗೆ ಹಾಜರಾಗುವಂತೆ ಯದುವಂಶದ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಅವರಿಗೆ ಪತ್ರ ಬರೆಯಲಾಗಿದೆ. ಹಾಗೇ, ಮೈಸೂರು ಭಾಗದ ಶಾಸಕರು ಸಂಸದರು ಅಧಿಕಾರಿಗಳು ಕೂಡ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಸಭೆಗೆ ಹಾಜರಾಗುವಂತೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರು ಪ್ರಮೋದಾದೇವಿ ಒಡೆಯರ್ ಅವರಿಗೆ ಸೂಚನಾ ಪತ್ರ ಕಳುಹಿಸಿದ್ದಾರೆ. ಆದರೆ, ಪ್ರಮೋದಾದೇವಿ ಒಡೆಯರ್ ಅವರು ಪ್ರಾಧಿಕಾರದ ಸಭೆಗೆ ಆಕ್ಷೇಪ ವ್ಯಕ್ಯಪಡಿಸಿದ್ದಾರೆ ಎಂದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಸಿಎಂ ಭಾಷಣದ ವೇಳೆ ಅಜಾನ್: ಮಾತು ಅರ್ಧಕ್ಕೆ ನಿಲ್ಲಿಸಿ ಸೈಲೆಂಟ್ ಆಗಿ ನಿಂತ ಸಿದ್ದರಾಮಯ್ಯ, ವಿಡಿಯೋ ಇಲ್ಲಿದೆ
“ಸೆಪ್ಟೆಂಬರ್ 3 ರಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಭಾಗಿಯಾಗಲು ಸೂಚನಾ ಪತ್ರ ನೀಡಿದ್ದೀರಿ. ಪ್ರಾಧಿಕಾರದ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಈಗಾಗಲೆ ನ್ಯಾಯಾಲಯ ಪ್ರಾಧಿಕಾರದ ವಿಚಾರಕ್ಕೆ ತಡೆ ನೀಡಿ, ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ಹೀಗಿದ್ದರೂ ತಾವು ಸಭೆ ನಡೆಸುತ್ತಿರುವುದು ಕಾನೂನುಬಾಹಿರ. ಒಂದು ವೇಳೆ ಸಭೆ ನಡೆಸಿದರೆ ಅದು ನ್ಯಾಯಾಲಯದ ತಡೆಯಾಜ್ಞೆಯ ಉಲ್ಲಂಘನೆಯಾಗುತ್ತದೆ” ಎಂದು ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಆಕ್ಷೇಪ ವ್ಯಕ್ತಪಡಿಸಿ ಪ್ರಮೋದಾದೇವಿ ಒಡೆಯರ್ ಅವರು ಜುಲೈ 26 ರಂದು ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಜೂನ್ 28 ರಂದು ಆದೇಶ ಹೊರಡಿಸಿತ್ತು. ಜುಲೈ 1 ರಿಂದಲೇ ಕಾಯ್ದೆ ಜಾರಿಗೆ ಬಂದಿದೆ. ಹೀಗಾಗಿ ತಡೆಯಾಜ್ಞೆ ಮಧ್ಯಂತರ ಆದೇಶ ತೆರವು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಮೋದಾದೇವಿ ಒಡೆಯರ್ ಪರ ವಕೀಲರು ಮತ್ತೆ ಮಧ್ಯಂತರ ಆದೇಶವನ್ನು ನೀಡಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಒಡೆಯರ್ ಪರ ವಕೀಲರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:38 am, Tue, 3 September 24